ಜಿಲ್ಲೆ

ಶ್ರೀಗಂಗಾಮಾತಾ ಸನ್ನಿಧಿಯಲ್ಲಿ ಗಂಗಾ-ಆರತಿ

ಗೋಕರ್ಣ: ಗಂಗಾಷ್ಟಮಿ ನಿಮಿತ್ತ ಗಂಗಾವಳಿಯ ಶ್ರೀಗಂಗಾಮಾತಾ ದೇವಾಲಯ ಆಡಳಿತ ಸಮಿತಿ, ವಿರಾಟ್ ಹಿಂದು ಯುವಕ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಜರುಗಿದವು.

ಬುಧವಾರ ರಾತ್ರಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಾಧ್ಯಕ್ಷ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿಶೇಷ ಗಂಗಾ-ಆರತಿ ಸಮಾರಂಭ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಇಲ್ಲಿನ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿ ಗುರೂಜಿ, ಬಿಜೆಪಿ ಪ್ರಧಾನ ವಕ್ತಾರ ಮತ್ತು ವಕೀಲ ನಾಗರಾಜ ನಾಯಕ ಕಾರವಾರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿದ್ದು ಶುಭ ಹಾರೈಸಿದರು.

ಜಗದೀಶ ಅಂಬಿಗ, ಚಿದಾನಂದ ಅಂಬಿಗ, ಪ್ರವೀಣ ಕಿಣಿ, ಪಾಂಡುರಂಗ ಅಂಬಿಗ ಮತ್ತಿತರರು ನಿರ್ವಹಿಸಿದರು. ಗಂಗಾಷ್ಟಮಿ ನಿಮಿತ್ತ ಮಂದಿರಕ್ಕೆ ವಿಶೇಷವಾದ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಹೆಗಡೆ ಗ್ರಾಮದ ಅಂಬಿಗ ಸಮಾಜ ಬಾಂಧವರಿಂದ ಸಾರ್ವಜನಿಕರಿಗೆ ಪ್ರಸಾದ ಭೋಜನ ಏರ್ಪಡಿಸಲಾಯಿತು. ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೆಲೋಡಿ-ಮೇಕರ್ಸ್ ಬಳಗದಿಂದ ರಸಮಂಜರಿ ನಡೆಯಿತು. ಉತ್ಸವ ನಿಮಿತ್ತ ಬುಧವಾರ ಹಾಗೂ ಗುರುವಾರ ಅಹೋರಾತ್ರಿ ಜರುಗಿದ ಜಾತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿ ಶರದೇವರ ದರ್ಶನ ಪಡೆದರು.