ತೋಟಬೆಂಗ್ರೆ ಪರಿಸರದ ನಿವಾಸಿಗಳಾದ ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಹಾಗೂ ಅಬ್ದುಲ್ ರಿಯಾಜ್ (40) ಶಿಕ್ಷೆಗೆ ಒಳಗಾದ ಅಪರಾಧಿಗಳು.
ಮಂಗಳೂರು : ನಗರ ಹೊರವಲಯದ ತೋಟ ಬೆಂಗ್ರೆ ಸಮುದ್ರ ಕಿನಾರೆಯಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ 20 ವರ್ಷಗಳ ಕಠಿನ ಸಜೆ ಮತ್ತು ಒಟ್ಟು 74 ಸಾವಿರ ರೂ. ದಂಡ ವಿಧಿಸಿದೆ.
ತೋಟಬೆಂಗ್ರೆ ಪರಿಸರದ ನಿವಾಸಿಗಳಾದ ಪ್ರಜ್ವಲ್ (33), ಅರುಣ್ ಅಮೀನ್ (34), ಆದಿತ್ಯ ಸಾಲ್ಯಾನ್ (28) ಹಾಗೂ ಅಬ್ದುಲ್ ರಿಯಾಜ್ (40) ಶಿಕ್ಷೆಗೆ ಒಳಗಾದ ಅಪರಾಧಿಗಳು.
ಪ್ರಕರಣದ ಹಿನ್ನೆಲೆ: 2018ರ ನ.18ರಂದು ಮಧ್ಯಾಹ್ನ 12.30ಕ್ಕೆ ಸಂತ್ರಸ್ತ ಯುವತಿ ಆಕೆಯ ಗೆಳೆಯನೊಂದಿಗೆ ಬೀಚ್ ಗೆ ಬಂದಿದ್ದರು. ನಿರ್ಜನ ಪ್ರದೇಶದಲ್ಲಿದ್ದ ಇವರನ್ನು ಗಮನಿಸಿದ ಅಲ್ಲಿದ್ದ ನಾಲ್ವರು ಯುವಕರು ಮತ್ತು ಮೂವರು ಅಪ್ರಾಪ್ತ ವಯಸ್ಸಿನ ಬಾಲಕರು ಅವರಿದ್ದಲ್ಲಿಗೆ ಹೋಗಿ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಯುವತಿಯ ಬಳಿ ಹೆಸರು, ಊರು, ಜಾತಿ ಇತ್ಯಾದಿಗಳನ್ನು ಕೇಳಿದ್ದಾರೆ. ಆಕೆಯ ಜತೆ ಬಂದಿದ್ದ ಗೆಳೆಯನನ್ನು ಹೆದರಿಸಿ, ಕೈಯಿಂದ ಹಲ್ಲೆ ನಡೆಸಿ ಆತನನ್ನು ಸ್ಥಳದಿಂದ ದೂರ ಕರೆದುಕೊಂಡು ಹೋಗಿದ್ದಾರೆ. ಉಳಿದವರು ಸಂತ್ರಸ್ತೆಯನ್ನು ಗಿಡಮರಗಳಿರುವ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅವಳನ್ನು ಹೆದರಿಸಿ, ಗೆಳೆಯನನ್ನು ಸಾಯಿಸುವುದಾಗಿ ಹೇಳಿ ಅವಳ ಮೇಲೆ ಬಲಪ್ರಯೋಗ ಮಾಡಿ ಒಬ್ಬರ ನಂತರ ಒಬ್ಬರು ಸರದಿಯಲ್ಲಿ ಅತ್ಯಾಚಾರ ಮಾಡಿದ್ದರು. ಅತ್ಯಾಚಾರ ಮಾಡಿದ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಅಥವಾ ದೂರು ನೀಡಿದಲ್ಲಿ ಸಂತ್ರಸ್ತೆಯನ್ನು ಹಾಗೂ ಆಕೆಯ ಗೆಳೆಯನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಯುವತಿ ಮತ್ತು ಆಕೆಯ ಗೆಳೆಯ ಸ್ಥಳದಿಂದ ತೆರಳಿದ್ದರು.
ಇದೇ ಸಂದರ್ಭದಲ್ಲಿ ಓರ್ವ ಯುವಕ ಆಕೆಯ ಬಳಿಯಿದ್ದ ಮೊಬೈಲ್ ಕಸಿದುಕೊಂಡು ಅದರಲ್ಲಿ ತನ್ನ ಹೆಸರನ್ನು ಹಾಗೂ ಮೊಬೈಲ್ ನಂಬರನ್ನು ಸೇವ್ ಮಾಡಿಕೊಂಡಿದ್ದ. ಘಟನೆ ಬಗ್ಗೆ ಯುವತಿ ಯಾರಿಗೂ ಹೇಳಿರಲಿಲ್ಲ. ಆದರೆ ಮೊಬೈಲ್ ನಂಬರ್ ಸೇವ್ ಮಾಡಿಕೊಡಿದ್ದ ಯುವಕ ಆಕೆ ಕರೆಮಾಡಿ ಮತ್ತೆ ಬಾ ಎಂದು ಕಿರುಕುಳ ಕೊಟ್ಟಿದ್ದ. ಯುವತಿ ಈ ವಿಚಾರವನ್ನು ತನ್ನ ಬಾವನಿಗೆ ಹೇಳಿದ್ದಳು. ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲು ಹೋಗಿದ್ದು, ಅಲ್ಲಿನ ಠಾಣಾಧಿಕಾರಿ ಘಟನೆ ನಡೆದ ಸ್ಥಳ ಮಂಗಳೂರು ಆಗಿರುವುದರಿಂದ ಅಲ್ಲಿಯೇ ದೂರು ನೀಡಿ ಎಂದು ಪ್ರಕರಣ ದಾಖಲಿಸಲು ನಿರಾಕರಣೆ ಮಾಡಿದ್ದರು. ಈ ವಿಚಾರ ತಿಳಿದು ಮಂಗಳೂರು ಮಹಿಳಾ ಠಾಣೆ ಪೊಲೀಸರಿಗೆ ತಿಳಿದು ಅವರು ಮಪ್ತಿಯಲ್ಲಿ ಯುವತಿಯ ಮನೆಗೆ ಹೋಗಿ ವಿಚಾರಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ಮಹಿಳಾ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕರಾಗಿದ್ದ ಕಲಾವತಿಕೆ ಹಾಗೂ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮಂಜುನಾಥ್ ಶೆಟ್ಟಿ ಅವರು ಸಮಗ್ರ ತನಿಖೆ ನಡೆಸಿದ್ದರು. ಎಸಿಪಿಯಾಗಿದ್ದ ಶ್ರೀನಿವಾಸ ಗೌಡ ಆರ್. ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 65 ಸಾಕ್ಷಿದಾರರ ಪೈಕಿ 40 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದ್ದು, 2020ರ ಜ.9ರಂದು ಸಾಕ್ಷಿ ವಿಚಾರಣೆ ಪ್ರಾರಂಭಗೊಂಡು 2024ರ ಎ.9ರಂದು ಪೂರ್ಣಗೊಂಡಿದೆ. ವಾದ- ಪ್ರತಿವಾದಗಳನ್ನು ಆಲಿಸಿದ ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವಿ.ಎನ್. ಅವರು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜು.30ರಂದು ಶಿಕ್ಷ ಪ್ರಮಾಣ ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಅಭಿಯೋಜನೆಯ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ಪ್ರತಿನಿಧಿಸಿ, ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡನೆ ಮಾಡಿದ್ದಾರೆ.
ನಾಲ್ವರು ಅಪರಾಧಿಗಳಿಗೆ ಭಾ.ದಂ.ಸಂ ಕಲಂ: 376 (ಡಿ) ಯಡಿ 20 ವರ್ಷಗಳ ಕಠಿನ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ. ದಂಡ ಪಾವತಿ ತಪ್ಪಿದಲ್ಲಿ 2 ವರ್ಷಗಳ ಕಠಿಣ ಸಜೆ ವಿಧಿಸಲಾಗಿದೆ. ಕಲಂ: 354 ರಡಿ ಒಂದು ವರ್ಷ ಸಾದಾ ಸಜೆ ಮತ್ತು ತಲಾ 5 ಸಾವಿರ ರೂ. ದಂಡ. ದಂಡ ಪಾವತಿಗೆ ತಪ್ಪಿದಲ್ಲಿ ಒಂದು ತಿಂಗಳ ಸಾದಾ ಸಜೆ. ಕಲಂ: 506ರಡಿ ಒಂದು ವರ್ಷ ಸಜೆ ಮತ್ತು ತಲಾ 2 ಸಾವಿರ ರೂ. ದಂಡ. ದಂಡ ಪಾವತಿಗೆ ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ. ಕಲಂ 323ರಡಿ ಆರು ತಿಂಗಳ ಸಾದಾ ಸಜೆ ಮತ್ತು ಒಂದು ಸಾವಿರ ರೂ. ದಂಡ. ದಂಡ ಪಾವತಿಗೆ ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ. ಕಲಂ 341ರಡಿ 500 ರೂ. ದಂಡ ಪಾವತಿಸುವಂತೆ ಆದೇಶಿಸಲಾಗಿದೆ. ಎಲ್ಲಾ ಸಜೆಗಳನ್ನು ಏಕಕಾಲಕ್ಕೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಒಟ್ಟು ದಂಡ ಮೊತ್ತೆ 74 ಸಾವಿರ ರೂ. ನಲ್ಲಿ 60,000 ರೂ. ಮೊತ್ತವನ್ನು ಸಂತ್ರಸ್ತೆಗೆ ಪಾವತಿಸುವಂತೆ ನ್ಯಾಯಾಲಯದ ಆದೇಶವಾಗಿದೆ. ಉಳಿದ 14,000 ರೂ.ವನ್ನು ಸರ್ಕಾರಕ್ಕೆ ಪಾವತಿಸಲು ತಿಳಿಸಲಾಗಿದೆ. ಸಂತ್ರಸ್ತೆಯ ಮೊಬೈಲ್‌ನ್ನು ಹಿಂದಿರುಗಿಸಲು ಮತ್ತು ಆರೋಪಿಗಳ ಮೊಬೈಲ್‌ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಲು ಆದೇಶವಾಗಿದೆ. ಸಂತ್ರಸ್ತ ಯುವತಿಗೆ ಸಮಾಜ ಕಲ್ಯಾಣ ಇಲಾಖೆಯಿಂದಲೂ ಈಗಾಗಲೇ ಪರಿಹಾರದ ನೆರವು ಲಭಿಸಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ಮೇಲಿದ್ದ ಪ್ರಕರಣ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ. ಯುವತಿಯ ಜತೆ ಬಂದಿದ್ದ ಗೆಳೆಯ ಬಿಹಾರ ಮೂಲದ ಹಿಂದಿ ಭಾಷಿಕನಾಗಿದ್ದ. ಘಟನೆ ನಡೆದ ಬಳಿಕ ಪತ್ತೆ ಇಲ್ಲ. ಸಾಕ್ಷಿ ನುಡಿಯಲು ನ್ಯಾಯಾಲಯಕ್ಕೂ ಹಾಜರಾಗಿಲ್ಲ.
ನ್ಯಾಯಾಧೀಶರು ತೀರ್ಪು ನೀಡುವ ವೇಳೆ ನಾಲ್ವರು ಕೂಡಾ ನ್ಯಾಯಾಲಯದಲ್ಲಿ ಹಾಜರಿದ್ದರು. ಅವರಿಗೆ ತಾವು ಮಾಡಿರುವ ಕೃತ್ಯಕ್ಕೆ ಅಪರಾಧಿಕ ಭಾವನೆ ಇರಲಿಲ್ಲ, ವಿಚಲಿತರೂ ಆಗಿರಲಿಲ್ಲ. ಶಿಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.