ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಅವರ ಪಕ್ಕದಲ್ಲೇ ಕುಳಿತಿದ್ದ ಗಡ್ಡದಾರಿ ಸಾಧುವೊಬ್ಬರು ಗಮನಸೆಳೆದರು. ಎಲ್ಲರಿಗೂ ಅವರನ್ನು ಎಲ್ಲಿಯೋ ನೋಡಿದ ನೆನಪು. ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ವೇಳೆಯೂ ಅವರನ್ನು ನೋಡಿದ ನೆನಪು ಹಾದು ಹೋಯಿತು. ಅದಕ್ಕಿಂತಲೂ ಕೂಡಲಿ ಶೃಂಗೇರಿ ಸಂಸ್ಥಾನದೊಂದಿಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂಬುದು ತಿಳಿದ ಬಳಿಕ ಅನೇಕರು ಮತ್ತಷ್ಟು ಆಶ್ಚರ್ಯಗೊಂಡರು.
ಹೌದು. ಮೋದಿ ಅವರ ಪಕ್ಕದಲ್ಲಿ ಕುಳಿತಿದ್ದ ಆ ವ್ಯಕ್ತಿಯ ಹೆಸರು ಗಣೇಶ್ವರ ಶಾಸ್ತ್ರಿ ದ್ರಾವಿಡ. ಇವರ ಪೂರ್ವಜರು ತಮಿಳುನಾಡು ಮೂಲದವರು. ಗಣೇಶ್ವರ ಶಾಸ್ತ್ರಿ ಸಂಸ್ಕೃತದ ಪ್ರಖಾಂಡ ಪಂಡಿತರು. ಈಗ ಕಾಶಿಯಲ್ಲೇ ನೆಲೆ ನಿಂತಿದ್ದಾರೆ. ಅಲ್ಲಿ ಸಂಸ್ಕೃತ ವೇದ ಪಾಠಶಾಲೆಯನ್ನೂ ನಡೆಸುತ್ತಿದ್ದಾರೆ. ಮೋದಿ ನಾಮಪತ್ರ ಸಲ್ಲಿಕೆ ವೇಳೆ ಅನುಮೋದಕರಾಗಿ ಸಹಿ ಹಾಕಿದವರಲ್ಲಿ ಗಣೇಶ್ವರ ಶಾಸ್ತ್ರಿಗಳೂ ಒಬ್ಬರು.
ಗಣೇಶ್ವರ ಶಾಸ್ತ್ರಿ ದ್ರಾವಿಡ ಅವರು ಕೂಡಲಿ ಶೃಂಗೇರಿ ಸಂಸ್ಥಾನದ ಆಸ್ಥಾನ ವಿದ್ವಾಂಸರೂ ಹೌದು. ಕಳೆದ ವರ್ಷ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆಗೆ ತೆರಳಿದ್ದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅವರು ಗಣೇಶ್ವರ ಶಾಸ್ತ್ರಿ ದ್ರಾವಿಡರನ್ನು ಭೇಟಿಯಾಗಿದ್ದರು.