ಜಿಲ್ಲೆ

ಗಣೇಶೋತ್ಸವ ಪೂರ್ವಭಾವಿ ಸಭೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಾದಾಪುರದ ಜಂಬೂರು ಬಾಣೆಯಲ್ಲಿರುವ ಎಫ್‌ಎಂಸಿ ಬಡಾವಣೆಯಲ್ಲಿ ಮೂರನೇ ವರ್ಷದ ಗಣೇಶೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು. ಶ್ರೀ ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಹರೀಶ್ ಪೊನ್ನಂಬಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವರ್ಷವೂ ಬಡಾವಣೆಯಲ್ಲಿ ಗಣೇಶೋತ್ಸವವನ್ನು ಭಕ್ತಿಪೂರ್ವಕವಾಗಿ ಸಡಗರದಿಂದ ಆಚರಿಸಲು ತೀರ್ಮಾನಿಸಲಾಯಿತು.

ಗಣೇಶೋತ್ಸವ ಪ್ರಯುಕ್ತ ಮೂರು ದಿನಗಳ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಸೆ.೭ರಂದು ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಮಧ್ಯಾಹ್ನ ಸಾರ್ವಜನಿಕ ಅನ್ನದಾನ, ಸಂಜೆ ಭಜನೆ ಹಾಗೂ ಮಹಾಪೂಜೆಯ ನಂತರ ಪ್ರಸಾದ ವಿತರಣೆ, ಸೆ.೮ರಂದು ಸಂಜೆ ರಂಗಪೂಜೆ ಮತ್ತು ಪ್ರಸಾದ ವಿತರಣೆ, ಸೆ. ೯ರಂದು ಬೆಳಗ್ಗೆ ಮಹಾಪೂಜೆ ನಂತರ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ, ಸಂಜೆ ೪ ಗಂಟೆಗೆ ಭವ್ಯ ಮಂಟಪದಲ್ಲಿ ಮಾದಾಪುರದ ಮುಖ್ಯಬೀದಿಗಳಲ್ಲಿ ಮೆರವಣಿಗೆಯ ನಂತರ ಮಾದಾಪುರ ಹೊಳೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶ್ರೀ ವಿನಾಯಕ ಮಿತ್ರ ಮಂಡಳಿ ಉಪಾಧ್ಯಕ್ಷ ಉಮೇಶ್ ಪೂಜಾರಿ, ಕಾರ್ಯದರ್ಶಿ ಚೇತನ್, ಖಜಾಂಜಿ ಅನಿಲ್ ಕುಲಾಲ್, ಮಹಿಳಾ ಸಮಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಸುಶೀಲಾ, ಕಾರ್ಯದರ್ಶಿ ಮೌನಶ್ರೀ ಹಾಗೂ ಬಡಾವಣೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.