ಜಿಲ್ಲೆ

ಹಿಂದು ಧರ್ಮ ಜಾಗೃತಿಗೆ ಗಣೇಶೋತ್ಸವ ಅವಶ್ಯಕ : ಪೇಜಾವರ ಶ್ರೀ

ಮೈಸೂರು: ಹಿಂದು ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಗೌರಿ-ಗಣೇಶನ ಹಬ್ಬವು ಸಾಮರಸ್ಯದ ಸಂಕೇತವಾಗಿದ್ದು. ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಉಡುಪಿಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಹೇಳಿದರು.

ಸ್ವರ್ಣ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಅಭಯಂ ಫೌಂಡೇಷನ್ ಭಾನುವಾರ ಹಮ್ಮಿಕೊಂಡಿದ್ದ ಸುಮಂಗಲಿಯರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನ ಪೂಜಿಸುವುದು ಹಿಂದು ಧರ್ಮಿಯರ ಪದ್ಧತಿ. ಇಂತಹ ಪವಿತ್ರ ಪೂಜಾ ಸ್ಥಾನ ಪಡೆದಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದರು.

ಬಾಲಗಂಗಾಧರನಾಥ ತಿಲಕರು ದೇಶದ ಸ್ವಾತಂತ್ರೃ ಹೋರಾಟದಲ್ಲಿ ಭಾರತೀಯರನ್ನು ಸಂಘಟಿಸಲು ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಪ್ರಸ್ತುತ ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವ ಅವಶ್ಯಕವಾಗಿದ್ದು, ನಮ್ಮ ಸಂಸ್ಕೃತಿ ರಕ್ಷಣೆ ಮಾಡುವುದು ಹಿಂದುಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಅಭಯಂ ಫೌಂಡೇಷನ್ ಅಧ್ಯಕ್ಷ ಎಂ.ಎಸ್. ಮುರಳೀಧರ್ ಶಾಸ್ತ್ರಿ, ಶ್ರೀ ವೈಷ್ಣವಿ ಸೇವಾ ಪರಿಷತ್ ಅಧ್ಯಕ್ಷ ಡಾ.ಕೆ. ಚಕ್ರಪಾಣಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಎಂ.ಕೆ. ಪುರಾಣಿ, ವಿಶ್ವ ಹಿಂದು ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ ಹಾಗೂ ಇತರರು ಇದ್ದರು.