ಹುಬ್ಬಳ್ಳಿ: ಇಲ್ಲಿಯ ಚನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) ಸೆ. 7ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಮೂರು ದಿನಗಳವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 6ರಂದು ಬೆಳಗ್ಗೆ 9ರಿಂದ 10.15ರೊಳಗೆ ಹಾಲಗಂಬ ಹಾಕಲಾಗುವುದು. ಸೆ. 7ರಂದು ಬೆಳಗ್ಗೆ 8ಕ್ಕೆ ಮೂರುಸಾವಿರ ಮಠದಿಂದ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಚನ್ನಮ್ಮ ಮೈದಾನಕ್ಕೆ ತಂದು ನಿಶ್ಚಿತ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಅಂದು ಬೆಳಗ್ಗೆ 10.30ಕ್ಕೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ಸಂಜೆ 6ಕ್ಕೆ ಮಹಾಮಂಗಳಾರತಿ, 7ಕ್ಕೆ ವಾರ್ಕರಿ ಸಂಪ್ರದಾಯದವರಿಂದ ಭಜನೆ, ರಾತ್ರಿ 8ಕ್ಕೆ ಗಂಗಾರತಿ ನಡೆಯಲಿದೆ ಎಂದರು.
8ರಂದು ಬೆಳಗ್ಗೆ 6ಕ್ಕೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗ ನಮಸ್ಕಾರ, 9ಕ್ಕೆ ಮಹಾಪೂಜೆ, 10.30ಕ್ಕೆ ಗಣಹೋಮ, 11.30ರಿಂದ ಸಂಜೆ 4.30ರವರೆಗೆ ನಿರಂತರ ಭಜನೆ, ಸಂಜೆ 6ಕ್ಕೆ ಮಹಾ ಆರತಿ, 7.45ಕ್ಕೆ ಸಂಘದ ಘೋಷ ವಾದನ, ರಾತ್ರಿ 8ಕ್ಕೆ ಗಂಗಾರತಿ ನಡೆಯಲಿದೆ ಎಂದರು.
9ರಂದು ಬೆಳಗ್ಗೆ 9ಕ್ಕೆ ಮಹಾ ಮಂಗಳಾರತಿ, 9.30ಕ್ಕೆ ಸವಾಲು, 11.45ಕ್ಕೆ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸಂಜೆ 4.30ರೊಳಗೆ ಇಂದಿರಾ ಗಾಜಿನ ಮನೆ ಪಕ್ಕದ ಬಾವಿಯಲ್ಲಿ ವಿರ್ಸಜನೆಯಾಗಲಿದೆ ಎಂದರು.
ಸ್ವಾಗತ ಸಮಿತಿ ನೇತೃತ್ವದಲ್ಲಿ ಪ್ರತಿಷ್ಠಾಪನಾ ಸಮಿತಿ, ವಿಸರ್ಜನಾ ಸಮಿತಿ, ಮೆರವಣಿಗೆ ಸಮಿತಿ ಸೇರಿದಂತೆ 8 ಸಮಿತಿ ರಚಿಸಲಾಗಿದೆ.
ಈ ಕಾರ್ಯಕ್ರಮಗಳಿಗೆ ಬಹಳಷ್ಟು ಸ್ವಾಮೀಜಿಗಳು, ನಾಯಕರು ಆಗಮಿಸುವರು. ಹಿಂದು ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಒಂದು ಮಾದರಿ ಗಣೇಶೋತ್ಸವ ಮಾಡುವ ಉದ್ದೇಶ ನಮ್ಮದು. ನಮ್ಮ ಉದ್ದೇಶಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಸ್ಪಂದಿಸಿದ್ದಾರೆ. ಹಬ್ಬಕ್ಕೆ ನಾಲ್ಕು ದಿನ ಮೊದಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದಾರೆ. ಸಮಸ್ತ ಹಿಂದು ಸಮಾಜದ ಪರವಾಗಿ ಅವರಿಗೆ ಧನ್ಯವಾದ ಎಂದರು.
ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ್ ಮಾತನಾಡಿ, ವಿಜೃಂಭಣೆಯಿಂದ ಗಣೇಶೋತ್ಸವ ಮಾಡಲಾಗುತ್ತಿದೆ. ಆದರೆ, ಕೆಲವರು ಲೆಕ್ಕಪತ್ರ ಕೇಳಿದ್ದಾರೆ ಎಂಬ ಮಾಹಿತಿ ಇದೆ. ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ. ಚ್ಯುತಿ ಬರುವಂಥ ಕೆಲಸ ಮಹಾಮಂಡಳ ಮಾಡಿಲ್ಲ. ಸುಳ್ಳು ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಮಹಾದೇವ ಕರಮರಿ, ಶೇಷಗಿರಿ ಕುಲಕರ್ಣಿ, ರಘು ಯಲ್ಲಕ್ಕನವರ, ಸುಭಾಷಸಿಂಗ್ ಜಮಾದಾರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.