ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗಣೇಶೋತ್ಸವಕ್ಕೆ ಹೊರಗಿನಿಂದ ಪಿಒಪಿ ಗಣೇಶಮೂರ್ತಿಗಳನ್ನು ತಂದು ಮಾರಾಟ ಮಾಡಲಾಗಿದೆ ಹಾಗೂ ಕೆಲವು ಕಡೆ ಪ್ರತಿಷ್ಠಾಪಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬುಧವಾರ ಪರಿಸರ ಇಲಾಖೆ ಉಪ ಪರಿಸರ ಅಧಿಕಾರಿ ಲೋಹಿತ್ ಕುಮಾರ ಬುಧವಾರ ಪಟ್ಟಣದಲ್ಲಿ ಪರಿಶೀಲನೆ ನಡೆಸಿದರು.
ಮುಖ್ಯರಸ್ತೆಯಲ್ಲಿಯೇ ದೊಡ್ಡ ಮೂರ್ತಿಯನ್ನು ಪಿಒಪಿಯಿಂದ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸಂಘಟಿಕರಿಗೆ 10 ಸಾವಿರ ರೂ. ದಂಡ ವಿಧಿಸಿದರು. ಮೂರ್ತಿ ಮಾರಾಟ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡುವಂತೆ ಸೂಚಿಸಿದರು.
ಈ ವೇಳೆ ಮಾತನಾಡಿದ ಲೋಹಿತ್ ಕುಮಾರ, ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣೇಶಮೂರ್ತಿಗಳ ಮಾರಾಟ, ಪ್ರತಿಷ್ಠಾಪನೆ ಮಾಡದಂತೆ ಆದೇಶವಿದೆ. ಆದರೂ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವುದು ಕಂಡುಬಂದಿದೆ. ಗಣೇಶೋತ್ಸವದ ಮಂಡಳಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಡುವಂತೆ ತಿಳಿಸಿ, 10 ಸಾವಿರ ರೂ. ದಂಡ ಹಾಕಲಾಗಿದೆ. ಈಗಾಗಲೇ ಪ್ರತಿಷ್ಠಾಪಿಸಿರುವ ಅಂತಹ ಮೂರ್ತಿಗಳನ್ನು ವಿಸರ್ಜನೆ ವೇಳೆ ವಶಕ್ಕೆ ಪಡೆಯಲಾಗುವುದು. ಹಳ್ಳಿಗಳಲ್ಲಿಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಸಿಬ್ಬಂದಿ ಇದ್ದರು.