ಹುಬ್ಬಳ್ಳಿ: ಮಹಾನಗರದಲ್ಲಿ ಗಣೇಶೋತ್ಸವವನ್ನು ಹಲವಾರು ದಶಕಗಳಿಂದ ಸಾರ್ವಜನಿಕವಾಗಿ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುವುದು ಹೆಮ್ಮೆಯ ಹಾಗೂ ಸಂತೋಷದ ಸಂಗತಿಯಾಗಿದೆ. ಅವಳಿನಗರದ ಜನರಲ್ಲಿ ಇರುವ ಶ್ರದ್ಧಾಭಕ್ತಿ, ಸಾಮಾಜಿಕ ಕಳಕಳಿ, ದೇಶಪ್ರೇಮವೇ ಇದಕ್ಕೆ ಮೂಲ ಕಾರಣವಾಗಿದೆ ಎಂದು ಹಿರಿಯ ಉದ್ಯಮಿ ಹಾಗೂ ಮಜೇಥಿಯಾ ಫೌಂಡೇಷನ್ ಅಧ್ಯಕ್ಷ ಜೀತೇಂದ್ರ ಮಜೇಥಿಯಾ ಅಭಿಪ್ರಾಯಪಟ್ಟರು.
ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಗುರುವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳವು ಪ್ರಕಟಿಸಿದ "ವಿಜಯೋತ್ಸವ 25' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಾಲ ಗಂಗಾಧರ ತಿಲಕರಿಂದ ಪ್ರೇರಿತವಾಗಿ ಸ್ವಾತಂತ್ರ್ಯ ಹೋರಾಟ ಸದುದ್ದೇಶದಿಂದ ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವವನ್ನು ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ನಂತರವೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಳಕಳಿಯುಳ್ಳ ಈ ಆಚರಣೆಗೆ ಸರ್ಕಾರವು ಧನಸಹಾಯ ನೀಡಬೇಕು ಎಂದು ಆಗ್ರಹಿಸಿದರು.
ವಿಎಕೆ ಫೌಂಡೇಷನ್ ಚೇರ್ಮನ್ ವೆಂಕಟೇಶ ಕಾಟವೆ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಭಕ್ತಿಯ ಆಚರಣೆಯ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಯುವಕರು ವಿದ್ಯಾಭ್ಯಾಸ, ವೃತ್ತಿಯ ಜತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕ ಗಣೇಶೋತ್ಸವವು ವೇದಿಕೆಯಾಗಿದೆ ಎಂದರು.
ಉದ್ದಿಮೆದಾರರಾದ ಶ್ರೀನಿವಾಸ ಏಕಬೋಟೆ, ರಾಜು ಶೀಲವಂತರ, ಸುಮಾ ಶೀಲವಂತರ, ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ ಮಾತನಾಡಿದರು. ಸವಿತಾ ಚಂದನಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ತೆಗ್ಗಿಹಳ್ಳಿ ವಂದಿಸಿದರು.
ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ, ರಾಜಶೇಖರ ಕರಕಣ್ಣವರ, ಚಿದಾನಂದ ಪೂಜಾರ, ಸಂತೋಷ ಕಾಟವೆ, ಮಹೇಶ ಸೇಟ್, ಸಿದ್ದಣ್ಣ ಅಂಗಡಿ, ರತ್ನಾ ಬಸಾಪುರ, ರೂಪಾ ಅಂಗಡಿ, ಆಶಾ ಪತ್ತಾರ, ತಾರಾಮತಿ ಪೋಳ, ಪುಷ್ಪಾ ಹಿತ್ತಾಳಿ, ಸರಸ್ವತಿ ಮೆಹರವಾಡೆ, ಅಕ್ಕಮ್ಮ ಕಂಬಳಿ, ಡಾ. ಮಂಜುಳಾ ಹತ್ತಿಮತ್ತೂರ, ಗಾಯತ್ರಿ ನೆಲ್ಲಿಕೊಪ್ಪ, ಪಾರ್ವತಿ ಹಿರೇಮಠ, ಅನಿತಾ ಜಡಿ, ಶೋಭಾ ಕಂಪ್ಲಿ, ಸಂಗೀತಾ ದೇವದಾಸ, ಸಂಗೀತಾ ಜಡಿ, ವಿಜಯಲಕ್ಷ್ಮಿ ಏಕಬೋಟೆ, ಉಷಾ ದೋಣಿ, ಮಧುಮತಿ ಪಾಟೀಲ, ಸುವರ್ಣಾ ಹಾನಗಲ್ ಮೊದಲಾದವರು ಉಪಸ್ಥಿತರಿದ್ದರು.
ವಿಜಯೋತ್ಸವ 25 ಕೈಪಿಡಿ
ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳ ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಪುಸ್ತಕವೊಂದನ್ನು ಪ್ರಕಟಿಸುತ್ತದೆ. ಈ ಬಾರಿ ವಿಜಯೋತ್ಸವ 60 ಪುಟಗಳ ಪುಸ್ತಕ ಹೊರತಂದಿದೆ. ಮಹಾಮಂಡಳದ ಇತಿಹಾಸ, ಕಾರ್ಯಚಟುವಟಿಕೆಗಳ ವಿವರ, ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತ ಮಾಹಿತಿಯನ್ನು ಈ ಕೈಪಿಡಿ ಒಳಗೊಂಡಿದೆ. ಮಹತ್ವದ ಫೋನ್ ನಂಬರ್ ನೀಡಲಾಗಿದೆ. ವಿವಿಧ ಲೇಖಕರು ಬರೆದ ಪ್ರಸ್ತುತ ವಿದ್ಯಮಾನಗಳ ಕುರಿತ ಲೇಖನಗಳು, ಸಾಮಾಜಿಕ ಕಳಕಳಿಯುಳ್ಳ ಗಣ್ಯರ ಪರಿಚಯ ಒಳಗೊಂಡಿದೆ. ಸಂಗೀತಾ ಇಜಾರದ ಅವರು ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.