ಚನ್ನರಾಯಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಸಿ.ಎನ್. ಮಂಜುನಾಥ್ ಮಾತನಾಡಿದರು ಸಿ.ಎನ್.ಬಾಲಕೃಷ್ಣ, ಸಿ.ಎನ್.ಪುಟ್ಟಸ್ವಾಮಿ, ಎಂ.ಎ. ಗೋಪಾಲಸ್ವಾಮಿ ಸಿ. ಎನ್.ಮೋಹನ್, ಚಿದಾನಂದ್ ಇದ್ದರು. 
ಜಿಲ್ಲೆ

ಸಾಮರಸ್ಯ ಇದ್ದಾಗ ಧರ್ಮ ಸಂಘರ್ಷ ಇರಲ್ಲ

ನಾಗೇಶ ಎಸ್

ಚನ್ನರಾಯಪಟ್ಟಣ: ಜನರ ನಡುವೆ ಸಾಮರಸ್ಯ ಇದ್ದಾಗ ಧರ್ಮ ಸಂಘರ್ಷಗಳು ಉಂಟಾಗುವುದಿಲ್ಲ. ಹೀಗಾಗಿ ಜನರೇ ಇದರ ಅರ್ಥ ಮಾಡಿಕೊಂಡಾಗ ದೇಶದಲ್ಲಿ ಕೋಮುಗಲಭೆಗಳು ಸಂಭವಿಸುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಸಿ.ಎನ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿರುವ 74ನೇ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ನಮ್ಮೂರ ಗಣಪ ಮಹಾಮಂಟಪದ ಮಾದರಿಯ ಅಲಂಕಾರವನ್ನು ಉದ್ಘಾಟಿಸಿ ಮಾತನಾಡಿದರು.

ನಾವುಗಳು ಎಲ್ಲರನ್ನೂ ಮನುಷ್ಯರಂತೆಯೇ ಕಾಣಬೇಕು. ನಮ್ಮಲ್ಲಿ ಮನುಷ್ಯತ್ವ ಕೂಡ ಇರಬೇಕು. ಇಷ್ಟೇ ಅಲ್ಲದೆ ಹೃದಯವಂತಿಕೆ ಬಹಳ ಮುಖ್ಯವಾದ ವಿಚಾರ. ಹೀಗಾಗಿ ನನಗೆ ಗೊತ್ತಿರುವುದು ಮನುಷ್ಯ ಜಾತಿ ಒಂದೇ. ಈ ದೃಷ್ಟಿಕೋನದಲ್ಲಿ ಸಿದ್ದರಾಮಯ್ಯನವರ ಹಿಂದು ಧರ್ಮದಲ್ಲಿ ಅಸಮಾನತೆ ಇದೆ ಎಂಬ ಹೇಳಿಕೆಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಜಾತಿ ಸಮೀಕ್ಷೆ ಬಗ್ಗೆ ಪರ-ವಿರೋಧಗಳ ಚರ್ಚೆ ನಡೆಯುತ್ತಿದ್ದು, ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.

ಇತ್ತೀಚೆಗೆ ನಡೆದ ಹೃದಯಾಘಾತ ಪ್ರಕರಣಗಳು ಹಾಸನಕ್ಕೆ ಮಾತ್ರ ಸೀಮಿತವಾಗದೆ, ಭಾರತದಲ್ಲಿ ಸುಮಾರು 30 ಲಕ್ಷ ಮಂದಿ ಪ್ರತಿ ವರ್ಷ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಅವರ ಮಾನಸಿಕ ಒತ್ತಡ, ಜೀವನಶೈಲಿ, ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದ್ಯಪಾನ ಮಾಡದವರು ಯಾರು ಎಂಬುದನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಸುಮಾರು 60ರಷ್ಟು ಸಾವುಗಳು ಜೀವನಶೈಲಿಯ ಆಧಾರಿತ ಕಾಯಿಲೆಗಳಿಂದ ಸಂಭವಿಸುತ್ತಿದೆ. ಹೀಗಾಗಿ ಮದ್ಯಪಾನ ಮತ್ತು ಧೂಮಪಾನ ನಿಲ್ಲಿಸಿ ಪ್ರತಿನಿತ್ಯ ಯೋಗಾಸನ ಮತ್ತು ವ್ಯಾಯಾಮ ಮಾಡುವಂತೆ ಸಲಹೆ ನೀಡಿದರು.

ಸಿ.ಎನ್.ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿ, ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್.ಅಶೋಕ್, ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ಆರ್.ಯತೀಶ್ ಕುಮಾರ್, ತಾಲೂಕು ಬಿಜೆಪಿ ಮುಖಂಡ ಚಿದಾನಂದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಯೋಗೇಶ್, ಸಿ.ಪಿ.ಕುಮಾರ್, ಸೇವಾ ಸಮಿತಿ ಸದಸ್ಯರಾ ಸಿ.ಕೆ.ಕೃಷ್ಣ , ನಂಜುಂಡ ಮೈಮ್, ಸತ್ಯನಾರಾಯಣ್, ಮನೋಹರ್, ಕಲಾವಿದ ರವೀಂದ್ ಇದ್ದರು.