ಜಿಲ್ಲೆ

ಮಾರಾಟಗಾರರಿಗಿಲ್ಲ ಗಣೇಶ ಕೃಪೆ

ರೇಷ್ಮೆ ನಗರ ಡೆಸ್ಕ್

ರಾಜಕಾರಣಿಗಳ ಉಚಿತ ವಿತರಣೆಯಿಂದ ವರ್ತಕರಿಗೆ ಹೊಡೆತ

ಚನ್ನಪಟ್ಟಣ: ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಯುವ ಸಮುದಾಯದ ಮನಸ್ಸು ಗೆಲ್ಲುವ ಯೋಜನೆಯನ್ನು ತಾಲೂಕಿನ ರಾಜಕಾರಣಿಗಳು ಈ ವರ್ಷವೂ ಮುಂದುವರಿಸಿದ್ದಾರೆ. ಆದರೆ ದಾನಿಗಳ ನಡೆ ಸ್ಥಳೀಯ ವ್ಯಾಪಾರಿಗಳ ವಹಿವಾಟಿಗೆ ಬರೆ ಎಳೆಯುವ ಸಂಭವ ಹೆಚ್ಚಿದೆ.

ವಿಘ್ನ ವಿನಾಶಕನ ಮೂರ್ತಿ ಮಾರಿ, ಹೊಟ್ಟೆ ತುಂಬಿಸಿಕೊಳ್ಳುವ ಸ್ಥಳೀಯ ವ್ಯಾಪಾರಿಗಳಿಗೀಗ ವಿಘ್ನ ಎದುರಾದಂತಾಗಿದೆ. ಹೌದು.., ಮೋದಕಪ್ರಿಯ ಗಣೇಶ ಹಬ್ಬ ಎಂದರೆ ಯುವ ಸಮುದಾಯಕ್ಕೆ ಎಲ್ಲಿಲ್ಲದ ಸಡಗರ. ಗಣೇಶನ್ನು ಪ್ರತಿಷ್ಠಾಪಿಸಿ ಅದನ್ನು ವಿಸರ್ಜನೆ ಮಾಡುವವರೆಗೂ ಯುವಕರ ಸಂಭ್ರಮಕ್ಕೆ ಪಾರವೇ ಇಲ್ಲ. ಸದ್ಯ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಹಬ್ಬಕ್ಕೆ ಸಾಥ್ ನೀಡುವ ಮೂಲಕ ಯುವ ಸಮುದಾಯದ ಮನಸ್ಸು ಗೆಲ್ಲಲು ತಾಲೂಕಿನ ರಾಜಕಾರಣಿಗಳು ಮುಂದಾಗಿದ್ದಾರೆ.

ಗಣೇಶ ಹಬ್ಬದಲ್ಲಿ ಎಲ್ಲ ಕಡೆ ವಿವಿಧ ಬಗೆಯ ಗಣೇಶ ಮೂರ್ತಿಗಳದ್ದೇ ಕಾರುಬಾರು. ನೂರು- ಸಾವಿರ ರೂ.ನಿಂದ ಆರಂಭವಾಗಿ ಲಕ್ಷದವರೆಗೂ ಗಣೇಶ ಮೂರ್ತಿಗಳ ಬೆಲೆ ಇರುವುದರಿಂದ ಗಣೇಶ ಪ್ರತಿಷ್ಠಾಪನೆ ಮಾಡಲು ಹಣ ಹೊಂದಿಸಿ, ಗಣೇಶ ಮೂರ್ತಿ ಖರೀದಿಸಲು ಸಾಕಷ್ಟು ಕಷ್ಟ ಪಡುತ್ತಿದ್ದರು ಆದರೆ ಕೆಲ ವರ್ಷಗಳಿಂದ ರಾಜಕಾರಣಿಗಳು ತಾಲೂಕಿನ ಜನತೆಗೆ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಮೂರ್ತಿ ವಿತರಣೆಗೆ ತಯಾರಿ ನಡೆಸಿದ್ದು, ಈಗಾಗಲೇ ನೋದಂಣಿ ಪ್ರಕ್ರಿಯೆ ಸಹ ಆರಂಭವಾಗಿದೆ.

2009ರಿಂದ ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು , ತಾಯಿ ಚನ್ನಮ್ಮ ಚಾರಿಟಬಲ್ ಟ್ರಸ್ಟ್ನಿಂದ ಉಚಿತವಾಗಿ ಗಣೇಶ ಮೂರ್ತಿ ವಿತರಿಸುತ್ತಿದ್ದಾರೆ. ಶಾಸಕರು 3ನೇ ಬಾರಿಗೆ ಗಣೇಶ ಮೂರ್ತಿ ನೀಡುತ್ತಿದ್ದಾರೆ.

ಸ್ಥಳೀಯ ವರ್ತಕರಿಂದಲೇ ಖರೀದಿಸಬಹುದಲ್ಲವೇ?

ತಾಲೂಕಿನಲ್ಲಿ ಗಣೇಶ ಮೂರ್ತಿ ತಯಾರು ಮಾಡುವವರು ಇಲ್ಲದಿದ್ದರೂ, ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹಲವಾರು ಮಂದಿ ಗಣೇಶ ಮೂರ್ತಿಗಳ ಮಾರಾಟಗಾರರಿದ್ದಾರೆ. ಕೆಲವರ್ಷಗಳಿಂದ ತಾಲೂಕಿನಲ್ಲಿ ನಡೆದುಕೊಂಡು ಬರುತ್ತಿರುವ ಉಚಿತ ಗಣೇಶಮೂರ್ತಿ ವಿತರಣೆಯಿಂದ ಈ ವ್ಯವಹಾರವನ್ನೇ ನಂಬಿರುವ ಮಂದಿ ಸಮಸ್ಯೆಗೆ ಸಿಲುಕುತ್ತಿರುವುದು ಸುಳ್ಳಲ್ಲ. ಉಚಿತ ಮೂರ್ತಿ ವಿತರಿಸುವವರು ಇವರುಗಳಿಂದಲೇ ರಿಯಾಯಿತಿ ದರದಲ್ಲಾದರೂ ಮೂರ್ತಿಗಳನ್ನು ಖರೀದಿಸುವ ಮನಸ್ಸು ಮಾಡಿದರೆ, ಇವರ ಸಮಸ್ಯೆಯನ್ನೂ ಬಗೆಹರಿಸಬಹುದಾಗಿತ್ತು. ಆದರೆ, ದೂರದ ತಮಿಳುನಾಡು ಸೇರಿ ವಿವಿಧ ಕಡೆಗಳಿಂದ ಮೂರ್ತಿಗಳನ್ನು ತಂದು ವಿತರಿಸಲಾಗುತ್ತಿದೆ.

ಮಾರಾಟಗಾರರಿಗೆ ಹೊಡೆತ ?

ಈವರ್ಷವೂ ತಾಲೂಕಿನಲ್ಲಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿರುವುದರಿಂದ ಮೂರ್ತಿ ವ್ಯಾಪಾರವನ್ನೇ ನಂಬಿ ಲಕ್ಷಾಂತರ ರೂ. ಬಂಡವಾಳ ಹೂಡಿರುವ ವರ್ತಕರಿಗೆ ಆತಂಕ ಎದುರಾಗಿದೆ. ಒಂದೆಡೆ ರಾಜಕೀಯ ನಾಯಕರು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಪ್ರತಿಷ್ಠಾಪಿಸುವರ ಸಂಭ್ರಮಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಮೂರ್ತಿ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ವರ್ತಕರ ಸಂಭ್ರಮ ಕಸಿದಿದೆ. ತಮಿಳುನಾಡು, ಬೆಂಗಳೂರು, ತಿರುಪತಿ, ಚಿಕ್ಕ ತಿರುಪತಿ, ಹೊಸಕೋಟೆ ಸೇರಿ ಹಲವೆಡೆಯಿಂದ ತರಹೇವಾರಿ ಗಣೇಶ ಮೂರ್ತಿಗಳನ್ನು ತರಿಸಲಾಗಿದೆ. ತಾಲೂಕಿನಲ್ಲಿ ಹಲವಾರು ಮಂದಿ ಮೂರ್ತಿ ಮಾರಾಟಗಾರರಿದ್ದು, ಯಾವುದೇ ಚುನಾವಣೆ ಇಲ್ಲದ ಕಾರಣದಿಂದ ಈ ವರ್ಷ ಉಚಿತ ಮೂರ್ತಿ ವಿತರಣೆಗೆ ಬ್ರೇಕ್ ಬೀಳಲಿದೆ ಎಂದು ಆಸೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಲಾಭದ ಆಸೆಯಿಂದ ಸಾಲ ಮಾಡಿ ಬಂಡವಾಳ ಹೂಡಿದ್ದರು. ಆದರೆ, ಉಚಿತ ಮೂರ್ತಿ ವಿತರಣೆ ಕಾರ್ಯ ಈ ವರ್ಷವೂ ಮುಂದುವರೆದಿರುವುದು ವರ್ತಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ.

ಗಣೇಶೋತ್ಸವದ ಹಿನ್ನೆಲೆ ಬಹಳ ಮಹತ್ವವಾಗಿದೆ. ಹಬ್ಬದ ಸಂಭ್ರಮದಲ್ಲಿ ನಾವೂ ಭಾಗಿಯಾಗಬೇಕೆಂದು ಹಾಗೂ ನೀರಾವರಿ ಯೋಜನೆಗಳಿಂದ ತಾಲೂಕು ಸಮೃದ್ಧವಾಗಿದ್ದು, ಹಬ್ಬದ ಸಂಭ್ರಮ ಹೆಚ್ಚಿಸುವ ಉದ್ದೇಶದಿಂದ ಗಣೇಶಮೂರ್ತಿ ವಿತರಿಸುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಸಿ.ಪಿ.ಯೋಗೇಶ್ವರ್  ಶಾಸಕ ಚನ್ನಪಟ್ಟಣ. ಗಣೇಶಮೂರ್ತಿ ವ್ಯಾಪಾರವನ್ನೇ ನೆಚ್ಚಿಕೊಂಡು ಲಕ್ಷಾಂತರ ರೂ. ಬಂಡವಾಳ ಹೂಡಿದ್ದೇವೆ. ಈಗಾಗಲೇ ಮೂರ್ತಿಗಳಿಗೆ ಪೂರ್ತಿ ಹಣ ಪಾವತಿಸಿ ತಂದಿದ್ದೇವೆ. ಅಂಗಡಿ ಬಾಡಿಗೆ, ಗೋದಾಮಿನ ಬಾಡಿಗೆಯನ್ನು ಸಹ ಸ್ವಂತ ಹಣದಲ್ಲಿ ಭರಿಸಬೇಕಿದೆ. ಯಾವುದೇ ಚುನಾವಣೆ ಇಲ್ಲದ ಹಿನ್ನೆಲೆಯಲ್ಲಿ ಈ ವರ್ಷ ಉಚಿತ ವಿತರಣೆ ಇರುವುದಿಲ್ಲ ಎಂದುಕೊಂಡಿದ್ದೆವು. ಇನ್ನು ವ್ಯಾಪಾರ ಯಾವ ರೀತಿ ಆಗುತ್ತದೆ ಕಾದು ನೋಡಬೇಕು. ವರದಬಾಬು ಗಣೇಶ ಮೂರ್ತಿ ಮಾರಾಟಗಾರ, ಚನ್ನಪಟ್ಟಣ. ಹಲವಾರು ವರ್ಷಗಳಿಂದ ಗೌರಿಗಣೇಶ ಹಬ್ಬಕ್ಕೆ ತಾಲೂಕಿನ ಎಲ್ಲ ಗ್ರಾಮಗಳಿಗೆ ಗಣೇಶನ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ. ಬಾಲ್ಯದಿಂದಲೂ ಗಣೇಶನ ಹಬ್ಬ ಎಂದರೆ ಬಹಳ ಆಸಕ್ತಿ. ಮೂರ್ತಿ ವಿತರಣೆ ವಿಚಾರದಲ್ಲಿ ಯಾವುದೇ ರಾಜಕೀಯ ಕಾರಣಗಳಿಲ್ಲ. ಈ ಹಿಂದಿನಂತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಎಚ್.ಸಿ.ಜಯಮುತ್ತು ತಾಲೂಕು ಜೆಡಿಎಸ್ ಅಧ್ಯಕ್ಷ.