ಜಿಲ್ಲೆ

ಉಕ ಪ್ರತ್ಯೇಕ ರಾಜ್ಯಕ್ಕಾಗಿ ಗಣೇಶ ಪ್ರತಿಷ್ಠಾಪನೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ನಿರ್ಲಕ್ಷ್ಯದ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಇಲ್ಲಿನ ನವನಗರದ ಪುನಿತ ರಾಜಕುಮಾರ ಸರ್ಕಲ್​ನಲ್ಲಿ ಸನಾತನ ಮಹಾರಾಜ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಉತ್ತರ ಕರ್ನಾಟಕ ಜನಶಕ್ತಿ ಸೇನೆ ಮತ್ತು ಪುನೀತ್ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎಸ್. ಶಂಕ್ರಣ್ಣ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಹಚ್ಚಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವ ಆರಂಭಿಸಿದ್ದರು. ನಾವು ಕೂಡ ಸಾರ್ವಜನಿಕ ಗಣೇಶ ಉತ್ಸವ ಆಚರಣೆ ಮೂಲಕ ಜನರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯ ಅರಿವು ಮೂಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಇಲ್ಲಿನ ಗಣೇಶ ಮೂರ್ತಿಯನ್ನು 31 ದಿನಗಳವರೆಗೆ ಪ್ರತಿಷ್ಠಾಪಿಸಲಾಗುವುದು. ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.