ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗೌರಿಗಣೇಶ ಹಬ್ಬದ ಸ್ವಾಗತಕ್ಕೆ ಗ್ರಾಮಾಂತರ ಜಿಲ್ಲೆಯ ಭರ್ಜರಿ ತಯಾರಿ ಆರಂಭಿಸಿದ್ದಾರೆ, ಸಾರ್ವಜನಿಕ ಗಣೇಶೋತ್ಸವಕ್ಕೆ ವಿವಿಧ ಸಂಘಟನೆಗಳು ಸನ್ನದ್ಧವಾಗಿದ್ದು, ಜಿಲ್ಲೆಯಲ್ಲಿ ಹಬ್ಬದ ಕಳೆ ಕಟ್ಟಿದೆ. ಈ ಬಾರಿ ಉತ್ತಮ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಆಚರಣೆಗೆ ಜನ ಉತ್ಸುಕರಾಗಿದ್ದಾರೆ.
ಮರಮಹಾಲಕ್ಷ್ಮೀ ಹಬ್ಬದ ಸಡಗರ ಮಾಸುವ ಮುನ್ನವೇ ಗೌರಿಗಣೇಶ ಹಬ್ಬ ಆಗಮಿಸಿದ್ದು ಮನೆಮನೆಗಳಲ್ಲಿ ಗಣೇಶನ ಆರಾಧನೆಗೆ ಸಿದ್ದತೆ ನಡೆದಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಸಜ್ಜಾಗಿದ್ದಾರೆ. ಇದರ ಜತೆಗೆ ಅನೇಕ ಸಮಿತಿಗಳು ಪರಿಸರ ಸ್ನೇಹಿ ಗಣಪ ಮೂರ್ತಿಗಳ ಪ್ರತಿಷ್ಟಾಪನೆ ಒತ್ತು ನೀಡಿದ್ದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ.
ತರಹೇವಾರಿ ಗಣಪನ ಆಗಮನ: ಎಂದಿನಂತೆ ಈ ಬಾರಿಯೂ ತರಹೇವಾರಿ ಗಣಪ ಮೂರ್ತಿಗಳು ಮಾರುಕಟ್ಟೆಗಳಲ್ಲಿ ಆಸೀನವಾಗಿವೆ. ಮುಖ್ಯವಾಗಿ ಪರಿಸರಸ್ನೇಹಿ ಮಣ್ಣಿನ ಗಣಪಗಳು ಹೆಚ್ಚೆಚ್ಚು ಕಂಡುಬರುತ್ತಿವೆ. ರಾಸಾಯನಿಕ ಬಣ್ಣಲೇಪಿತ ಮೂರ್ತಿಗಳಿಗಿಂತ ಮಣ್ಣಿನ ಬಣ್ಣರಹಿತ ಮೂರ್ತಿಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಜಿಲ್ಲಾಡಳಿತದ ಸೂಚನೆ ಜತೆಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಕಾರಣ ಬಣ್ಣರಹಿತ ಮಣ್ಣಿನ ಗಣೇಶನ ಆರಾಧನೆಗೆ ಭಕ್ತರು ಮುಂದಾಗಿದ್ದಾರೆ. ಅರ್ಧ ಅಡಿಯಿಂದ ಹಿಡಿದು ಆರೇಳು ಅಡಿವರೆಗಿನ ಗಣಪ ಮೂರ್ತಿಗಳು ಈಗಾಗಲೇ ಅಂಗಡಿಗಳ ಸಾಲಿನಲ್ಲಿ ರಾರಾಜಿಸುತ್ತಿವೆ. ಅಶ್ವಾರೂಢ ಗಣಪ, ಪರಿಸರ ಸಂರಕ್ಷಕ ಗಣಪ, ಸಿಂಹಾಸನದಲ್ಲಿ ಕುಳಿತ ಗಣಪ. ಕೈಯಲ್ಲಿ ಶಿವಲಿಂಗ ಹಿಡಿದ ಗಣಪ, ಆನೆ, ಸಿಂಹ, ನವಿಲುಗಳ ಮೇಲೆ ಆಸೀನನಾದ ಗಣಪ, ಸಂಪೂರ್ಣ ಕಪ್ಪು ಬಣ್ಣದ ಗಣಪ, ಗಜಕೇಸರಿ ಮೂರ್ತಿ, ನರ್ತನ ಮಾಡುತ್ತಿರುವ ಗಣಪ ಹೀಗೆ ತರಹೇವಾರಿ ರೂಪದಲ್ಲಿ ಗಣಪಮೂರ್ತಿಗಳು ಮಾರುಕಟ್ಟೆಗಳಿಗೆ ಬಂದಿವೆ.
ಪಿಒಪಿ ಬ್ಯಾನ್, ಮಣ್ಣಿನ ಗಣಪ ದುಬಾರಿ: ಪ್ಲಾಸ್ಟರ್ ಆ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ, ಮಣ್ಣಿನ ಗಣಪ ಮೂರ್ತಿಗಳ ದರ ಗಗನಕ್ಕೇರಿದೆ.
ಸುಮಾರು 2 ಅಡಿ ಗಣಪನಿಗೆ 1 ಸಾವಿರ ರೂಪಾಯಿಯಿಂದ 1500 ರೂಪಾಯಿವರೆಗೆ ದರ ನಿಗಧಿಯಾಗಿದೆ. ಸಣ್ಣ ಗಾತ್ರದ ಗಣಪ ಮೂರ್ತಿಗಳಿಗೂ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ದರ ದುಬಾರಿಯಾಗಿದೆ. ಪರಿಸರ ಸ್ನೇಹಿತ ಮಣ್ಣಿನ ಗಣಪ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದರೂ ಅವುಗಳಿಗೆ ರಾಸಾಯನಿಕ ಬಣ್ಣ ಲೇಪಿಸಲಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಬಣ್ಣ ರಹಿತ ಗಣಪ ಮೂರ್ತಿಗಳಿಗೆ ಹೆಚ್ಚಿನ ದರ ನಿಗಧಿಯಾಗಿದ್ದು. ಬಣ್ಣ ಲೇಪಿತ ಮೂರ್ತಿಗಳ ದರ ಸ್ವಲ್ಪ ಕಡಿಮೆ ಇದೆ.
ಪುಟಾಣಿಗಳ ಸದ್ದು: ಕಳೆದೊಂದು ತಿಂಗಳಿಂದಲೇ ಪುಟಾಣಿಗಳು ಗಣೇಶಪ್ರತಿಷ್ಟಾಪನೆಗೆ ಚಂದಾವಸೂಲಿ ಮಾಡುವಲ್ಲಿ ನಿರತರಾಗಿದ್ದಾರೆ. ತಮ್ಮ ಬೀದಿಗಳಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡುವುದು ಪುಟಾಣಿಗಳಿಗೆ ದೊಡ್ಡ ಸಂಭ್ರಮ. ಗಣೇಶ ಸಮಿತಿಗಳು ದೊಡ್ಡ ಮಟ್ಟದಲ್ಲಿ ಉತ್ಸವ ನಡೆಸುವ ಸಂಭ್ರಮ ಒಂದೆಡೆಯಾದರೆ ಮಕ್ಕಳು ಬೀದಿಗಳಲ್ಲಿ ಗಣೇಶೋತ್ಸವ ನಡೆಸುವುದು ಮತ್ತೊಂದು ಬಗೆಯ ಸಂಭ್ರಮಕ್ಕೆ ಕಾರಣವಾಗುತ್ತದೆ. ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ನೀಡುವ ಪಾಲಕರು, ನೆರೆಹೊರೆಯವರು ಗಣೇಶನ ಸಂಭ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.
ಪ್ಲಾಸ್ಟರ್ ಆ್ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಬಣ್ಣರಹಿತ ಮಣ್ಣಿನ ಗಣಪನ ಆರಾಧನೆ ಮೂಲಕ ಪರಿಸರಸ್ನೇಹಿ ಹಬ್ಬ ಆಚರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬಾರದು. ಗಣೇಶೋತ್ಸವದ ನಿಯಮಗಳನ್ನು ಪಾಲಿಸುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಬೇಕು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ