ganesha festival 
ಜಿಲ್ಲೆ

ಪಿಒಪಿ ಬ್ಯಾನ್, ಮಣ್ಣಿನ ಗಣಪ ದುಬಾರಿ

ಶಿವರಾಜ.ಎಂ

ಮೂರ್ತಿಗಳಿಗೆ ರಾಸಾಯನಿಕ ಬಣ್ಣ ಲೇಪಿತ

ಮಾರುಕಟ್ಟೆಗಳಲ್ಲಿ ಗಜಾನನ ವಿರಾಜಮಾನ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪರಿಸರಕ್ಕೆ ಮಾರಕವಾಗಲಿರುವ ಪ್ಲಾಸ್ಟರ್ ಆ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದು, ಮಣ್ಣಿನ ಗಣಪ ಮೂರ್ತಿಗಳ ದರ ಗಗನಕ್ಕೇರಿದೆ.
ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ಐದಾರು ಅಡಿಯಿಂದ ಹಿಡಿದು ಸುಮಾರು 10 ಅಡಿ ಎತ್ತರದ ಪಿಒಪಿ ಗಣಪ ಮೂರ್ತಿಗಳ ಪ್ರತಿಷ್ಟಾಪನೆ ನಡೆಯುತ್ತಿತ್ತು. ಈ ಬಾರಿ ಸರ್ಕಾರದ ವತಿಯಿಂದ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದ್ದು, ಜಿಲ್ಲಾಡಳಿತವೂ ಹದ್ದಿನ ಕಣ್ಣಿಟ್ಟಿರುವುದರಿಂದ ಪಿಒಪಿ ಗಣಪ ಮೂರ್ತಿಗಳು ಮಾರುಕಟ್ಟೆಗಳಲ್ಲಿ ಕಾಣಸಿಗದಂತಾಗಿವೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಗಣಪ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದು ದರವೂ ಗಗನಮುಖಿಯಾಗಿದೆ. ಸುಮಾರು 2 ಅಡಿ ಗಣಪನಿಗೆ 1200 ರೂಪಾಯಿಯಿಂದ 1500 ರೂಪಾಯಿವರೆಗೆ ದರ ನಿಗಧಿಯಾಗಿದೆ. ಇನ್ನು ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಟಾಪಿಸುವ ಏಳೆಂಟು ಅಡಿ ಮಣ್ಣಿನ ಗಣಪನಿಗೆ 12 ಸಾವಿರ ರೂ.ನಿಂದ ಹಿಡಿದು 20 ಸಾವಿರ ರೂಪಾಯಿವರೆಗೆ ದರ ನಿಗಧಿಯಾಗಿರುವುದು ಕಂಡುಬರುತ್ತಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಟಾಪಿಸುವ ಬೃಹತ್ ಗಾತ್ರದ ಮಣ್ಣಿನ ಗಣಪ ಮೂರ್ತಿ ತಯಾರಿಗೆ ಒತ್ತು ನೀಡಿರುವುದರಿಂದ ಸಣ್ಣ ಗಾತ್ರದ ಗಣಪ ಮೂರ್ತಿಗಳ ತಯಾರಿಕೆ ಈ ಬಾರಿ ತಗ್ಗಿದೆ ಎಂಬ ಮಾತು ಕೇಳಿಬರುತ್ತಿದ್ದು, ಸಣ್ಣ ಗಾತ್ರದ ಗಣಪ ಮೂರ್ತಿಗಳಿಗೂ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ದರ ದುಬಾರಿಯಾಗಿದೆ.
ರಾಸಾಯನಿಕ ಬಣ್ಣ ಲೇಪಿತ: ಪರಿಸರ ಸ್ನೇಹಿತ ಮಣ್ಣಿನ ಗಣಪ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದರೂ ಅವುಗಳಿಗೆ ರಾಸಾಯನಿಕ ಬಣ್ಣ ಲೇಪಿಸಲಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಬಣ್ಣ ರಹಿತ ಗಣಪ ಮೂರ್ತಿಗಳಿಗೆ ಹೆಚ್ಚಿನ ದರ ನಿಗಧಿಯಾಗಿದ್ದು. ಬಣ್ಣ ಲೇಪಿತ ಮೂರ್ತಿಗಳ ದರ ಸ್ವಲ್ಪ ಕಡಿಮೆಇದೆ. ಪಿಒಪಿ ಗಣಪ ಮೂರ್ತಿಗಳ ಕಡೆ ನಿಗಾ ವಹಿಸಿರುವ ಅಧಿಕಾರಿಗಳು ರಾಸಾಯನಿಕ ಬಣ್ಣ ಲೇಪಿತ ಮೂರ್ತಿಗಳನ್ನು ಗಮನಿಸುತ್ತಿಲ್ಲ ಎನ್ನಲಾಗಿದೆ.
ಶೆಡ್‌ಗಳಿಂದ ಹೊರಬರಬೇಕಿದೆ: ಹೊಸಕೋಟೆ ಸೇರಿ ಹಲವು ಕಡೆಗಳಲ್ಲಿ ಈಗಾಗಲೇ ತಯಾರಾದ ಪಿಒಪಿ ಗಣಪ ಮೂರ್ತಿಗಳನ್ನು ಶೆಡ್‌ಗಳಲ್ಲಿ ಗೌಪ್ಯವಾಗಿಟ್ಟು, ಸಾರ್ವಜನಿಕ ಗಣೇಶೋತ್ಸವದವರಿಗೆ ಮಾರಾಟ ಮಾಡಲು ಸಿದ್ದತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಧಿಕಾರಿಗಳ ಕಣ್ಣುತಪ್ಪಿಸಿ ಮಣ್ಣಿನ ಗಣಪನ ಮಾದರಿಯಲ್ಲಿ ಬಿಕರಿಗೆ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಗಣೇಶ ಹಬ್ಬ ಕಳೆದು ನಾಲ್ಕೈದು ದಿನಗಳ ಬಳಿಕ ಹಲವು ಕಡೆ ಆಚರಿಸುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಈ ಮೂರ್ತಿಗಳು ವಿರಾಜಮಾನವಾಗಲಿವೆ ಎಂಬ ಮಾತುಗಳು ಹರಿದಾಡುತ್ತಿವೆ.
ತರಹೇವಾರಿ ಗಣಪ: ಕೈಯಲ್ಲಿ ಶಿವಲಿಂಗ ಹಿಡಿದ ಗಣಪ, ಆನೆ, ಸಿಂಹ, ನವಿಲುಗಳ ಮೇಲೆ ಆಸೀನನಾದ ಗಣಪ, ಸಂಪೂರ್ಣ ಕಪ್ಪು ಬಣ್ಣದ ಗಣಪ, ಗಜಕೇಸರಿ ಮೂರ್ತಿ, ನರ್ತನ ಮಾಡುತ್ತಿರುವ ಗಣಪ, ಕೈಲಾಸ ಗಣಪ ಸೇರಿ ತರಹೇವಾರಿ ಮಾದರಿಯ ಮೂರ್ತಿಗಳು ಮಾರುಕಟ್ಟೆಗಳಲ್ಲಿ ಗಮನ ಸೆಳೆಯುತ್ತಿವೆ.
ಶಾಂತಿ ಸಭೆ, ಪಥ ಸಂಚಲನ: ಗೌರಿಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುಭದ್ರತೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸರು ಅಲರ್ಟ್ ಆಗಿದ್ದಾರೆ. ಈಗಾಗಲೇ ಸರಣಿಯಾಗಿ ಗ್ರಾಪಂ ಮಟ್ಟದಿಂದಲೂ ಶಾಂತಿ ಸಭೆ ನಡೆಸಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಆಯೋಜಕರೊಂದಿಗೆ ಸಮಾಲೋಚನೆ ನಡೆಸಿ ಜಾಗೃತಿ ಮೂಡಿಸಲಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪೊಲೀಸರು ಪಥ ಸಂಚಲನ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪಿಒಪಿ ಗಣಪ ಮೂರ್ತಿ ತಯಾರಿಕೆ ಹಾಗೂ ಮಾರಾಟಕ್ಕೆ ತಡೆ ಹಾಕಲಾಗಿದೆ. ಆಯಾ ತಾಲೂಕು ವ್ಯಾಪ್ತಿಯ ತಹಸೀಲ್ದಾರ್ ನೇತೃತ್ವದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಇದುವರೆಗೆ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು ಮೂರ್ತಿ ತಯಾರಿಕೆಗೆ ಬ್ರೇಕ್ ಹಾಕಲಾಗಿದೆ. ಮಾರುಕಟ್ಟೆಗಳಲ್ಲಿ ಪಿಒಪಿ ಗಣಪ ಮೂರ್ತಿಗಳು ಕಂಡುಬಂದಿಲ್ಲ. ಹಬ್ಬದ ದಿನದಂದು ಮತ್ತಷ್ಟು ಎಚ್ಚರಿಕೆ ವಹಿಸಲಾಗುವುದು.

ಎಚ್.ಅಮರೇಶ್, ಅಪರ ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ