ಜಿಲ್ಲೆ

ಗಣೇಶನಿಗೆ ಈ ಬಾರಿ ನಾಣ್ಯಗಳಿಂದ ವಿಶೇಷ ಅಲಂಕಾರ

ಪಂಕಜ ಕೆ.ಎಂ.

ವಿಕ್ರಂ ಲ್ಯಾಂಡರ್, ಚಂದ್ರಯಾನ - 3 ಥೀಮ್ ನಲ್ಲಿ ಗಣೇಶೋತ್ಸವ ಆಚರಣೆ

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಒಂದಿಲ್ಲೊಂದು ಹೊಸತನದ ಸೃಷ್ಟಿಸುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ಈ ಬಾರಿ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸಿ ವೈಭವದಿಂದ ಹಬ್ಬದ ಆಚರಣೆಗೆ ಸಜ್ಜಾಗುತ್ತಿದೆ.

ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್, ಈ ಬಾರಿ ಗಣೇಶೋತ್ಸಕ್ಕೆ ಲಕ್ಷ್ಮಿ ಕಟಾಕ್ಷದ ಸ್ಪರ್ಶ ನೀಡುತ್ತಿದೆ.

ಐವತ್ತು ಲಕ್ಷ ರೂ. ಮೊತ್ತದ ನಾಣ್ಯಗಳು ಹಾಗೂ ಕೋಟ್ಯಂತರ ರೂ. ಮೌಲ್ಯದ ನೋಟುಗಳಿಂದ ಅಲಂಕರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 150ಕ್ಕೂ ಅಧಿಕ ಜನರ ತಂಡ ಅಲಂಕಾರ ಕಾರ್ಯದಲ್ಲಿ ನಿರತವಾಗಿದೆ. ಸೆ.18 ರಂದು ಬೆಳಿಗ್ಗೆಯಿಂದ ವಿಶೇಷ ಪೂಜೆ ನಡೆಯಲಿದೆ.

ಚಂದ್ರಯಾನ - 3 ವಿಶೇಷ:

ಚಂದ್ರಯಾನ-3 ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಈ ಬಾರಿ ಚಂದ್ರಯಾನ- 3, ವಿಕ್ರಂ ಲ್ಯಾಂಡರ್, ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್, ಮೇರಾ ಭಾರತ್ ಮಹಾನ್ ಥೀಮ್ ಒಳಗೊಂಡ ಅಲಂಕಾರ ಮಾಡುವ ಮೂಲಕ ಗಮನ ಸೆಳೆಯಲು ಟ್ರಸ್ಟ್ ಸಿದ್ಧತೆ ನಡೆಸಿದೆ.

ಅಲಂಕಾರಕ್ಕಾಗಿ ಐದು, ಹತ್ತು, ಇಪ್ಪತ್ತು ರೂಪಾಯಿ ಮೊತ್ತದ ತಲಾ ಒಂದೂವರೆ ಲಕ್ಷ ನಾಣ್ಯಗಳು, ಐದು, ಹತ್ತು, ಇಪ್ಪತ್ತು, 100, 500 ರೂ ಮೊತ್ತದ ನೋಟುಗಳಿಂದ ಗಣೇಶ ಮೂರ್ತಿಯನ್ನು ಸಿಂಗರಿಸಲಾಗುತ್ತಿದೆ. ನೋಟುಗಳ ನಿಖರ ಮೌಲ್ಯ ಇನ್ನೂ ನಿಗದಿ ಮಾಡಿಲ್ಲ. ಭಕ್ತಾದಿಗಳು ಗಣೇಶನ ಅಲಂಕಾರಕ್ಕಾಗಿ ಲಕ್ಷಾಂತರ ರೂ. ಮೊತ್ತದ ನೋಟುಗಳನ್ನು ಪ್ರತಿನಿತ್ಯ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹಬ್ಬದ ವೇಳೆಗೆ ನೋಟುಗಳ ಮೌಲ್ಯ ತಿಳಿಯಲಿದೆ ಎನ್ನುತ್ತಾರೆ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್ ರಾಜ್.