ವಿಜಯವಾಣಿ ಸುದ್ದಿಜಾಲ ಧಾರವಾಡ
ಗಣೇಶೋತ್ಸವ ನಿಮಿತ್ತ ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಸಮಾರಂಭವು 9ನೇ ದಿನವಾದ ಭಾನುವಾರ ಸಂಭ್ರಮದಿಂದ ನೆರವೇರಿತು.
ನಗರದ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಭಾನುವಾರ ವಿಸರ್ಜಿಸಲಾಯಿತು. ಬಹುತೇಕ ಮಂಡಳಗಳು ಡಿಜೆ ಅಬ್ಬರದೊಂದಿಗೆ ಮೂರ್ತಿಗಳ ವಿಸರ್ಜನೆ ಮಾಡಿದರೆ, ಮರಾಠಾ ಕಾಲನಿ ದುರ್ಗಾದೇವಿ ಬಳಿ ಶ್ರೀ ವಿನಾಯಕ ಉತ್ಸವ ಮಂಡಳಿ ಸ್ಥಾಪಿಸಿದ್ದ ಮೂರ್ತಿಯನ್ನು ಡೋಲ್ ತಾಷಾ ಮೂಲಕ ವಿಸರ್ಜನೆ ಮಾಡಿದ್ದು ವಿಶೇಷವಾಗಿತ್ತು.
ಸಂಜೆ 7 ಗಂಟೆಗೆ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮರಾಠಾ ಕಾಲನಿ, ಶಿವಾಜಿ ವೃತ್ತ, ಸುಭಾಷ ರಸ್ತೆ ಹೊಸಯಲ್ಲಾಪುರ ಮಾರ್ಗವಾಗಿ ನುಚ್ಚಂಬ್ಲಿ ಬಾವಿಗೆ ತೆರಳಿ ವಿಸರ್ಜನೆ ಮಾಡಲಾಯಿತು.
ವಿಸರ್ಜನೆ ಮೆರವಣಿಗೆಯಲ್ಲಿ ಕೊಲ್ಹಾಪುರದಿಂದ ಆಗಮಿಸಿದ್ದ ಡೋಲ್ ತಾಷಾ ತಂಡ ಗಮನ ಸೆಳೆಯಿತು. ಡೋಲ್ ತಾಷಾ ತಂಡ ಮೊದಲು ಗಣೇಶನಿಗೆ ವಂದನೆ ಸಲ್ಲಿಸಿ ಮೆರವಣಿಗೆ ಆರಂಭಿಸುತ್ತಿದ್ದಂತೆ ಜನರು ಡೋಲ್ ಸದ್ದು ಕೇಳಿ ಆನಂದಿಸಿದ್ದಲ್ಲದೆ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.