ಜಿಲ್ಲೆ

ಗಣೇಶನಿಗೂ ಕರೊನಾ ವಿಘ್ನ!

ರವಿ ಗೋಸಾವಿ ಬೆಳಗಾವಿ: ತಾಯಿ ಪಾರ್ವತಿ ಸ್ನಾನ ಮಾಡುವಾಗ ಶಿವನನ್ನು ಒಳಹೋಗಲು ಬಿಡದೇ ಬಾಗಿಲಲ್ಲೇ ನಿಲ್ಲಿಸಿದ ಗಣೇಶ, ನಂತರ ಗಜಮುಖನಾದ ಕಥೆ ಇನ್ನೂ ಜನಜನಿತ. ಆದರೆ, ಸಕಲರ ವಿಘ್ನವನ್ನೂ ನಿವಾರಿಸುವ ವ್ನಿೇಶ್ವರನಿಗೂ ಈ ಬಾರಿ ‘ಕರೊನಾ ವಿಘ್ನ’ ಎದುರಾಗಿದೆ.

ಭಕ್ತರು ಹಾಗೂ ಸಾರ್ವಜನಿಕ ಉತ್ಸವ ಸಮಿತಿಗಳು ಅತ್ಯಂತ ಸಂಭ್ರಮದಿಂದ ಪ್ರತಿಷ್ಠಾಪಿಸಿ ಆರಾಧಿಸುವ ಗಣೇಶ ಮೂರ್ತಿಗಳಿಗೆ ಈ ಬಾರಿ ಗಡಿದಾಟಿ ಬರಲಾಗದ ಪರಿಸ್ಥಿತಿ ಎದುರಾಗಿದೆ. ಇದರಿಂದ ಹಬ್ಬ ಆಚರಣೆಗೂ ತೊಡಕಾದಂತಾಗಿದೆ.

ಕುಂದಾನಗರಿಯ ಗಣೇಶೋತ್ಸವ ರಾಜ್ಯದಲ್ಲಿಯೇ ಹೆಸರುವಾಸಿ. ಸುತ್ತಲಿನ ಜಿಲ್ಲೆ ಹಾಗೂ ನೆರೆ ರಾಜ್ಯದವರು ಕೂಡ ಬೆಳಗಾವಿ ಗಣೇಶೋತ್ಸವ ವೀಕ್ಷಿಸಲು ಆಗಮಿಸುತ್ತಾರೆ. ಆದರೆ, ಈ ಬಾರಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಉತ್ಸವ ಹೇಗೆ ಆಚರಿಸಬೇಕೆಂಬ ಚಿಂತೆ ಉತ್ಸವ ಸಮಿತಿಗಳನ್ನೂ ಕಾಡುತ್ತಿದೆ.

ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲು ಕೊಲ್ಲಾಪುರದಿಂದ ಬೃಹದಾಕಾರದ ಮೂರ್ತಿಗಳನ್ನು ತರುವುದು ವಾಡಿಕೆ. ಈ ಬಾರಿ ಮೂರ್ತಿ ತರಲು ರಾಜ್ಯದ ಗಡಿ ದಾಟಿದರೆ ಕ್ವಾರಂಟೈನ್ ಆಗುವ ಆತಂಕದಿಂದ ಜಿಲ್ಲೆಯಲ್ಲಿನ ಗಣೇಶ ಮಹಾಮಂಡಳಗಳು ಮಹಾರಾಷ್ಟ್ರದಿಂದ ಮೂರ್ತಿ ತರುವ ನಿರ್ಧಾರವನ್ನೇ ಕೈಬಿಟ್ಟಿವೆ ಎನ್ನಲಾಗುತ್ತಿದೆ.

ಅನುಮತಿ ಅನುಮಾನ: ಹಬ್ಬಕ್ಕಿಂತ ಮುಂಚೆ 8 ರಿಂದ 10 ದಿನ ಮೊದಲೇ ಮೂರ್ತಿ ತಂದು ನಗರದ ಹಲವೆಡೆ ಮುಚ್ಚಿಟ್ಟು, ಪ್ರತಿಷ್ಠಾಪನೆ ದಿನ ಸಾವಿರಾರು ಜನ ಸೇರಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಇದೀಗ ಕರೊನಾ ನಿಯಂತ್ರಣಕ್ಕಾಗಿ ದೈಹಿಕ ಅಂತರಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚು ಜನ ಒಂದೆಡೆ ಸೇರಿ ಸಭೆ-ಸಮಾರಂಭ, ಹಬ್ಬ-ಹರಿದಿನಗಳ ಆಚರಣೆಗೆ ನಿರ್ಬಂಧನೆಗಳಿವೆ. ಹೀಗಿರುವಾಗ, ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಅವಕಾಶ ನೀಡುತ್ತ್ತದೆಯೋ? ಇಲ್ಲವೋ? ಎಂಬ ಗೊಂದಲ ಗಣೇಶ ಮಹಾಮಂಡಳಗಳಲ್ಲಿದೆ.

ಆರ್ಡರ್ ನೀಡುತ್ತಿಲ್ಲ: ಕಳೆದ ಬಾರಿ ನಗರದಲ್ಲಿ ಬೃಹತ್ ಗಾತ್ರದ 1075 ಸಾರ್ವಜನಿಕ ಗಣೇಶ ಮೂರ್ತಿಗಳ ಪೈಕಿ ಬಹುತೇಕ ಎಲ್ಲರೂ ಕನಿಷ್ಠ 10 ರಿಂದ 15, 20 ಹಾಗೂ 25 ಅಡಿ ಎತ್ತರ ಮೂರ್ತಿಯನ್ನು 25 ರಿಂದ 60-80 ಸಾವಿರ ರೂ. ಬೆಲೆಗೆ ಖರೀದಿಸಿ ಪ್ರತಿಷ್ಠಾಪಿಸುತ್ತಿದ್ದವು. ಈ ಸಲ ಕರೊನಾ ಹಾವಳಿಯಿಂದ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಚಿಕ್ಕ ಗಾತ್ರದ ಮೂರ್ತಿ ಪ್ರತಿಷ್ಠಾಪನೆಗೆ ತೀರ್ಮಾನಿಸಿವೆ. ದೊಡ್ಡ ಗಾತ್ರದ ಮೂರ್ತಿಗೆ ಯಾರೂ ಆರ್ಡರ್ ನೀಡುತ್ತಿಲ್ಲ ಎನ್ನುತ್ತಾರೆ ತಯಾರಕರು.

ನೆರೆಗೂ ತಗ್ಗಿರಲಿಲ್ಲ ಬೆಳಗಾವಿ ಗಣೇಶ ಚತುರ್ಥಿ ಸಂಭ್ರಮ: ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಭವಿಸಿದ ಅತಿವೃಷ್ಟಿಗೆ ಬೆಳಗಾವಿ ಜಿಲ್ಲೆ ಅಕ್ಷರಶಃ ನಲುಗಿಹೋಗಿತ್ತು. ಆದರೂ ಕುಂದಾನಗರಿಯಲ್ಲಿ 1905ರಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ್ದ ಗಣೇಶೋತ್ಸವದ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ. 2019ರ ಗಣೇಶ ಚತುರ್ಥಿಗೆ 3,896 ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದಲ್ಲಿ ಸಾವಿರಕ್ಕೂ ಅಧಿಕ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಸಾರ್ವಜನಿಕ ಮಹಾಮಂಡಳಗಳು ಪ್ರತಿಷ್ಠಾಪಿಸಿ, 11 ದಿನಗಳ ಕಾಲ ಸಂಭ್ರಮದಿಂದಲೇ ಆಚರಿಸಿದ್ದವು. ಆದರೆ, ಪ್ರಸಕ್ತ ವರ್ಷದ ಹಬ್ಬಕ್ಕೆ ಕರೊನಾ ಮಹಾಮಾರಿ ಕಾಟ ತೊಡಕು ಮಾಡಲಿರುವುದರಿಂದ ಗಣೇಶ ಚತುರ್ಥಿ ಸಂಭ್ರಮಕ್ಕೂ ಅನಿಶ್ಚಿತತೆ ಎದುರಾಗಿದೆ.

ಈ ಬಾರಿ ಬೆಲೆ ಹೆಚ್ಚು: ಕೊಲ್ಲಾಪುರಕ್ಕೆ ತೆರಳಲಾಗದ ಸ್ಥಿತಿಯಲ್ಲಿರುವ ಮಹಾಮಂಡಳಗಳು ಸ್ಥಳೀಯ ಮೂರ್ತಿಕಾರರನ್ನೇ ಅವಲಂಬಿಸಿವೆ. ಸ್ಥಳೀಯ ಕಲಾವಿದರನ್ನೇ ಸಂಪರ್ಕಿಸಿ 3 ರಿಂದ 5 ಅಡಿ ಗಾತ್ರದ ಮೂರ್ತಿ ಸಿದ್ಧಪಡಿಸಲು ಬೇಡಿಕೆ ಇಡುತ್ತಿವೆ. ಇದರಿಂದ ಸ್ಥಳೀಯ ಕಲಾವಿದರಿಗೆ ಸಾಕಷ್ಟು ಬೇಡಿಕೆ ಬಂದಂತಾಗಿದೆ. ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆ ಬರುತ್ತಿರುವುದು ಮತ್ತು ಕಾರ್ಮಿಕರು ಹಾಗೂ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಮೂರ್ತಿಗಳ ಬೆಲೆ ತುಸು ಹೆಚ್ಚಿಸುವುದು ಅನಿವಾರ್ಯ ಎನ್ನುತ್ತಾರೆ ಬೆಳಗಾವಿಯ ಗಣೇಶ ಮೂರ್ತಿಕಾರ ವಿಶಾಲ ಗೋಧೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಅನುಮತಿ ಬಗ್ಗೆ ಸರ್ಕಾರದಿಂದ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ. ಕೆಲವೇ ದಿನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಹಾಮಂಡಳಗಳು ಹಾಗೂ ಮೂರ್ತಿ ತಯಾರಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. |ಡಾ. ಎಸ್.ಬಿ. ಬೊಮ್ಮನಹಳ್ಳಿ. ಜಿಲ್ಲಾಧಿಕಾರಿ, ಬೆಳಗಾವಿ