ಜಿಲ್ಲೆ

ಪರಿಸರಸ್ನೇಹಿ ಮಣ್ಣಿನ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಸೂಚನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜಿಲ್ಲೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಸೌಹಾರ್ದಯುತವಾಗಿ ಆಚರಿಸಬೇಕು. ಪರಿಸರಸ್ನೇಹಿ ಮಣ್ಣಿನ ಗಣಪತಿ ಪ್ರತಿಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಹಬ್ಬದ ಆಚರಣೆ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಿ.ಓ.ಪಿ ಯಿಂದ ನಿರ್ಮಿಸಿರುವ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ವಿಷಕಾರಿ ರಾಸಾಯನಿಕಗಳು ಜಲಮೂಲಗಳಾದ ಕೆರೆ, ಬಾವಿ, ಹಳ್ಳ ಸೇರಿ ನೀರು ಕಲುಷಿತಗೊಳ್ಳುತ್ತದೆ. ಇದು ಜಲಚರಗಳಿಗೆ ಹಾಗೂ ಮಾನವನಿಗೆ ಅತ್ಯಂತ ಹಾನಿಕರಕ. ಪಿ.ಓ.ಪಿ ಗಣೇಶ ಮೂರ್ತಿಗಳ ತಯಾರಿ ಅಥವಾ ಹೊರ ಜಿಲ್ಲೆಗಳಿಂದ ಪಿ.ಓ.ಪಿ ವಿಗ್ರಹಗಳು ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಿ, ವಾಹನ ತಪಾಸಣೆ ನಡೆಸಬೇಕು. ಮಣ್ಣಿನ ಗಣಪತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹಿಸಬೇಕೆಂದರು.

ಪಿ.ಓ.ಪಿ ಗಣಪತಿ ವಿಗ್ರಹಗಳ ಸಾಗಾಣಿಕೆ, ದಾಸ್ತಾನು ಹಾಗೂ ಮಾರಾಟವನ್ನು ತಡೆಗಟ್ಟಲು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ವಿಗ್ರಹಗಳ ತಯಾರಿಕಾ ಘಟಕ, ಮಾರಾಟ ಸ್ಥಳಗಳಿಗೆ ಅನಿರೀಕ್ಷಿತ ಭೇಟಿಗಳನ್ನು ನೀಡಿ, ತಪಾಸಣೆ ಮಾಡಬೇಕು ಎಂದರು.

ಸಾಂಪ್ರದಾಯಿಕವಾಗಿ ಗಣೇಶ ಮೂರ್ತಿ ವಿಸರ್ಜಿಸಲು ಅನುಕೂಲವಾಗುವಂತೆ ಸ್ಥಳಿಯ ಸಂಸ್ಥೆಗಳು ಕೆರೆ, ನದಿಪಾತ್ರಗಳಲ್ಲಿ ಸ್ಥಳಗಳನ್ನು ನಿಗದಿಪಡಿಸಬೇಕು. ಪೂಜೆಗೆ ಬಳಸಿದ ಹೂವು ಸೇರಿದಂತೆ ಮತ್ತಿತರ ತ್ಯಾಜ್ಯಗಳ ಶೇಖರಣೆಗೆ ಸಂಗ್ರಹಣಾ ಘಟಕಗಳನ್ನು ಅಳವಡಿಸಬೇಕು ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕಡ್ಡಾಯವಾಗಿ ಪೋಲೀಸ್​ ಇಲಾಖೆ ಹಾಗೂ ಸ್ಥಳಿಯ ಸಂಸ್ಥೆಗಳಿಂದ ಅನುಮತಿಗಳನ್ನು ಪಡೆಯಬೇಕು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಧ್ವನಿ ವರ್ಧಕಗಳ ಬಳಕೆಗೆ ನಿಷೇಧವಿರುತ್ತದೆ ಎಂದರು.

ಗಣೇಶ ಪ್ರತಿಷ್ಠಾನ ಪೆಂಡಾಲ್​ಗಳಲ್ಲಿ ಸಿ.ಸಿ.ಟಿವಿ ಗಳ ಅಳವಡಿಕೆ, ಬೆಳಕಿನ ವ್ಯವಸ್ಥೆಗಳನ್ನು ಆಯೋಜಕರು ಮಾಡುವುದು ಸೂಕ್ತ. ಬ್ಯಾನರ್​ಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಅಳವಡಿಕೆ ಮಾಡುವಂತಿಲ್ಲ. ಬ್ಯಾನರ್​ಗಳ ಅಳವಡಿಕೆಗೆ ಸೂಕ್ತ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಎಎಸ್​ಪಿ ಸುಧಾಕರ್​ ನಾಯಕ್​, ಸಹಾಯಕ ಕಮೀಷನರ್​ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.