ಜಿಲ್ಲೆ

ಇಂದಿರಾ ಬಡಾವಣೆಯಲ್ಲಿ ಗಣೇಶೋತ್ಸವದ ಸಂಭ್ರಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ಇಲ್ಲಿನ ಇಂದಿರಾ ಬಡಾವಣೆಯ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಮತ್ತು ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ ಆಚರಿಸಲಾದ 23 ನೇ ವರ್ಷದ ಗೌರಿ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಶುಕ್ರವಾರ ಸಂಜೆ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಮಕ್ಕಳಿಗೆ, ಮಹಿಳೆಯರಿಗೆ ಸಂಗೀತ ಕುರ್ಚಿ, ಪಾಸಿಂಗ್ ದ ಬಾಲ್, ಲೆಮೆನ್ ವಿತ್ ಸ್ಪೂನ್, ಕೆರೆ-ದಡ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಬಡಾವಣೆಯ ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಗಣೇಶೋತ್ಸವದ ಅಂಗವಾಗಿ ಸ್ಥಳೀಯ ಶರಣ್ ಸಾರಥ್ಯದ ಡ್ರೀಮ್ ಸ್ಟಾರ್ ನೃತ್ಯ ಸಂಸ್ಥೆ, ಹಾಗೂ ನಿಶಿ ಸಾರಥ್ಯದ ಡಿ.ಸಿ. ಡ್ಯಾನ್ಸ್ ಸ್ಟುಡಿಯೋ ವತಿಯಿಂದ ನಡೆದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ಗಮನ ಸೆಳೆಯಿತು. ಈ ವೇಳೆ ಮಾತನಾಡಿದ ಗೋಲ್ಡನ್ ಗೆಳೆಯರ ಬಳಗದ ಅಧ್ಯಕ್ಷ ಭಕ್ತರಾಜು, ಗಣಪತಿ ಕಾರ್ಯಕ್ರಮಗಳು ಮೋಜು ಮಸ್ತಿ ಮಾಡುವ ಕಾರ್ಯಕ್ರಮಗಳಲ್ಲ.

ಈ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಸಮಾಜದ ಜನರನ್ನು ಒಂದೆಡೆ ಸೇರಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ. ಜಾತಿ ಭೇದಗಳನ್ನು ಮರೆತು ಎಲ್ಲರೂ ಒಂದಾಗಿ ಈ ಕಾರ್ಯಕ್ರಮ ಆಚರಿಸಬೇಕು. ಭಕ್ತರು ಜ್ಞಾನ, ಸಮೃದ್ಧಿ ಮತ್ತು ಯಶಸ್ಸಿನ ಆಶೀರ್ವಾದವನ್ನು ಪಡೆಯಲು ಗಣೇಶನನ್ನು ಪೂಜಿಸುತ್ತಾರೆ.

ಯಾವುದೇ ಹೊಸ ಉದ್ಯಮಕ್ಕೂ ಮೊದಲು ಗಣೇಶನನ್ನು ಆರಾಧಿಸಲಾಗುತ್ತದೆ. ಈ ಹಬ್ಬ ಅಡೆತಡೆಗಳನ್ನು ತೆಗೆದುಹಾಕಿ ಶುಭ ಆರಂಭಗಳನ್ನು ಆಹ್ವಾನಿಸುವ ಸಮಯವಾಗಿದೆ. ಪರಸ್ಪರ ಪ್ರೀತಿ, ವಿಶ್ವಾಸ, ವಾತ್ಸಲ್ಯದಿಂದ ಬೆರೆತು ಬಾಳಲು ಬಡಾವಣೆಯಲ್ಲಿ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.

ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಗೋಲ್ಡನ್ ಗೆಳೆಯರ ಬಳಗದ ಉಪಾಧ್ಯಕ್ಷ ರಿಯಾಜ್, ಕಾರ್ಯದರ್ಶಿ ಆದಂ, ಖಜಾಂಚಿ ಶರಣ್, ಪ್ರಮುಖರಾದ ಜಗದೀಶ್ ಕುಮಾರ್, ಗಿರೀಶ್, ಯತೀಶ, ಪೂರ್ಣಚಂದ್ರ, ಮನು, ಸಮೀವುಲ್ಲಾ, ಕುಮಾರ್, ರಿತಿನ್, ಧನು, ಮಂಜು ಮತ್ತಿತರರು ಇದ್ದರು.