ಜಿಲ್ಲೆ

ಗೂಳೂರು ಗಣೇಶ ವಿಸರ್ಜನೆ ; ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ; ಜಾನಪದ ಕಲಾ ತಂಡಗಳ ಸಾಥ್

Tumakuru

ತುಮಕೂರು : ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ವೈಭವಯುತವಾಗಿ ಜರುಗಿತು.

ಬಲಿಪಾಢ್ಯಮಿಯಂದು ಕಣ್ಣುಧಾರಣೆಯೊಂದಿಗೆ (ನ.5ರಂದು) ಆರಂಭವಾದ ಗಣೇಶ ಉತ್ಸವವು ಡಿ.10ರವರೆಗೆ ನಡೆದಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಆರಂಭವಾದ ಉತ್ಸವವು ಭಾನುವಾರ ಸಂಜೆ ಸಂಪನ್ನಗೊಂಡಿತು.

ನಾಡಿನ ವಿವಿಧೆಡೆಗಳಿಂದ ಬಂದಿದ್ದ ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದರು. ಉತ್ಸವದ ಬಳಿಕ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗೂಳೂರು ಕೆರೆಯಲ್ಲಿ ಸಂಜೆ ಸೂರ್ಯಾಸ್ತಮಾನಕ್ಕೂ ಮುನ್ನ ವಿಸರ್ಜಿಸಲಾಯಿತು. ವರ್ಣರಂಜಿತ ಸಿಡ್ಡಿಮದ್ದಿನ ಪ್ರದರ್ಶನ ಗಮನಸೆಳೆಯಿತು.

ಶನಿವಾರ ಸಂಜೆ 7 ಗಂಟೆಗೆ ಊರಿನ ಯಜಮಾನರ ಮನೆಯಿಂದ ನಂದಿಧ್ವಜ ಹಾಗೂ ಕರಡಿ ವಾದ್ಯದೊಂದಿಗೆ ಗಣಪತಿ ದೇವಾಲಯಕ್ಕೆ ಕಳಸ ತಂದು ಮಹಾ ಮಂಗಳಾರತಿ ನೆರವೇರಿಸಲಾಯಿತು. 18 ಕೋಮಿನ ಜನರು ಮಹಾಗಣಪತಿಯನ್ನು ದೇವಾಲಯಲದ ಗೋಪುರದಿಂದ ಹೊರತಂದು ಸರ್ವಾಲಂಕೃತ ವಾಹನದಲ್ಲಿ ಕೂರಿಸಿ ರಾತ್ರಿ 11.30ರವರೆಗೂ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ, ಉತ್ಸವದ ಸಂಭ್ರಮದಲ್ಲಿ ಮಿಂದೆದ್ದರು.

ಮಹಿಷಾಸುರ ಮರ್ದಿನಿ : ಭಾನುವಾರ ಮಧ್ಯಾಹ್ನದಿಂದ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ಮುಂದುವರಿದ ಗಣೇಶಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ಬಾರಿಯ ಮೆರವಣಿಗೆಯಲ್ಲಿ ಮಹಿಷಾಸುರ ಮರ್ದಿನಿ ರೂಪಕ ಗಮನ ಸೆಳೆಯಿತು. ಇದರ ಜತೆಗೆ ನಂದಿ, ನವಿಲು, ಜಿರಾಫೆ, ಕವಾಡಿ ಡ್ಯಾನ್ಸ್, ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಜತೆ ಸಾಗಿದ ಮೆರವಣಿಗೆಯು ಗೂಳೂರು ಕೆರೆ ಬಳಿ ಸಂಪನ್ನಗೊಂಡಿತು.

ವರ್ಷದಲ್ಲಿ 2ನೇ ಬಾರಿ ಉತ್ಸವ! : ಗೂಳೂರು ಗಣೇಶೋತ್ಸವವು ಪ್ರತೀ ವರ್ಷ 1 ತಿಂಗಳು ನಡೆಯುತ್ತಿತ್ತು. ಕಳೆದ ಬಾರಿ ಗ್ರಾಪಂ ಚುನಾವಣೆ ಹಾಗೂ ಅಕಾಲಿಕ ಮಳೆ ಕಾರಣ 2 ತಿಂಗಳು ಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವವನ್ನು ಮುಂದೂಡಲಾಗಿತ್ತು. 2021ರ ಜ.23ರಂದು ಶನಿವಾರ ರಾತ್ರಿಯಿಂದ ಆರಂಭವಾದ ಮಹಾಗಣಪತಿ ಉತ್ಸವವು ಎರಡು ದಿನ ನಡೆದಿತ್ತು. ಈ ವರ್ಷ ಮತ್ತೆ ಕಾರ್ತೀಕ ಮಾಸದಲ್ಲಿ ಗಣೇಶೋತ್ಸವವು ನಡೆದಿದ್ದು 2ನೇ ಬಾರಿ ಮಹಾಗಣಪತಿ ಉತ್ಸವ ನಡೆದಿರುವುದು ವಿಶೇಷವೆನಿಸಿದೆ.