ಹುಬ್ಬಳ್ಳಿ : ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 11 ದಿನಗಳವರೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ವತಿಯಿಂದ ಸೋಮವಾರದಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸೆ. 18 ರಿಂದ ಗಣೇಶೋತ್ಸವ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ಮೈದಾನದಲ್ಲಿ ಅರ್ಥಪೂರ್ಣವಾಗಿ ಹಬ್ಬ ಆಚರಿಸಲಾಗುವುದು. ಈ ಸಂದರ್ಭದಲ್ಲಿ 11 ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒಂದು ಮಂಟಪ ಹಾಗೂ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮತ್ತೊಂದು ಮಂಟಪ ಸೇರಿ ಎರಡು ಮಂಟಪಗಳನ್ನು ಹಾಕಲು ಪರವಾನಿಗೆ ನೀಡುವಂತೆ ಸಮಿತಿ ಸದಸ್ಯರು ಆಗ್ರಹಿಸಿದರು.
ಗಣೇಶೋತ್ಸವ ಆಚರಣೆಗೆ ಮೈದಾನಕ್ಕೆ ತಗಲುವ ವೆಚ್ಚವನ್ನು ಭರಿಸಲಾಗುವುದು ಹಾಗೂ ಪಾಲಿಕೆ ವಿಧಿಸುವ ಷರತ್ತುಗಳನ್ನು ಪಾಲಿಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಸಂಚಾಲಕ ಹನುಮಂತಸಾ ನಿರಂಜನ, ಮಹೇಶ ಶೇಟ, ವಸಂತ ನಿರಂಜನ, ಚನ್ನಬಸಪ್ಪ ಧಾರವಾಡಶೆಟ್ರ, ಜಯದೇವ ಪವಾರ, ರಮೇಶ ಮಗಜಿಕೊಂಡಿ, ರಾಜಶ್ರೀ ಜಡಿ, ವಿಜಯಶ್ರೀ ಖೋಡೆ, ವಿಲಾಸ ಕುಂಠೆ ಹಾಗೂ ಇತರರು ಹಾಜರಿದ್ದರು.