ಹೊಸಪೇಟೆ: ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು, ಐದು ದಿನಗಳ ಕಾಲ ಭಕ್ತರಿಂದ ಆರಾಧಿಸಲ್ಪಟ್ಟ ವಿನಾಯಕನನ್ನು ಸಂಭ್ರಮ, ಸಡಗರದೊಂದಿಗೆ ವಿಸರ್ಜನಾ ಮೆರವಣಿಗೆ ಚಾಲನೆ ಪಡೆದಿದೆ.
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳ ಹಾಗೂ ದ್ವನಿವರ್ದಕಗಳ ಹಿಮ್ಮೇಳ, ಬಾನಂಗಳದಲ್ಲಿ ಸಿಡಿಮದ್ದುಗಳ ಬೆಳಕಿನ ಚಿತ್ತಾರ, ಯುವಕರ ಕುಣಿತ ಮೆರವಣಿಗೆಯನ್ನು ಮತ್ತಷ್ಟು ರಂಗೇರಿಸಿದೆ. ಕೆಲ ಗಣೇಶೋತ್ಸವ ಸಮಿತಿ ಕಾರ್ಯಕರ್ತರು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್, ದಿ.ಪುನೀತ್ ರಾಜಕುಮಾರ ಅವರ ಭಾವಚಿತ್ರವನ್ನು ಹಿಡಿದು ಹೆಜ್ಜೆ ಹಾಕಿದರು.
ಸರ್ಕಾರಿ, ವಿವಿಧ ಸಂಘ-ಸಂಸ್ಥೆಗಳ ಕಚೇರಿ, ಸಾರ್ವಜನಿಕ ಸ್ಥಳ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಲಂಭೋಧರನ ಮೂರ್ತಿಗಳಿಗೆ ಭಾನುವಾರ ಸಂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿ, ಅದ್ದೂರಿ ಮೆರವಣಿಗೆ ಆರಂಭಿಸಲಾಯಿತು.
ಇಲ್ಲಿನ ಮೇನ್ ಬಜಾರ್, ಪಾದಗಟ್ಟಿ, ದೊಡ್ಡ ಮಸೀದಿ, ಮೂರಂಗಡಿ ಸರ್ಕಲ್ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ಜಮಾಯಿಸಿರುವ ಜನರು, ಗಣೇಶ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.