ಹುಣಸೂರು: ಸಾರ್ವಜನಿಕರಿಗೆ ಸಮಸ್ಯೆ ಎದುರಾಗದ ರೀತಿ ಕಾನೂನು ಚೌಕಟ್ಟಿನಲ್ಲಿ ನಾಗರಿಕರು ಗಣೇಶ ಹಬ್ಬ ಆಚರಿಸಬೇಕು ಎಂದು ಹುಣಸೂರು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮುನಿಸ್ವಾಮಿ ಸಲಹೆ ನೀಡಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಮಂಗಳವಾರ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಣಪತಿ ಪ್ರತಿಷ್ಠಾನ ಸಮಿತಿ ಸರ್ಕಾರದ ಸುತ್ತೋಲೆ ಅನ್ವಯದಂತೆ ನಿಗದಿತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪಿಸಬೇಕು. ಪೊಲೀಸ್ ಮತ್ತು ಸ್ಥಳೀಯ ಆಡಳಿತ ಕಚೇರಿಯಲ್ಲಿ ಅನುಮತಿ ಪಡೆದಿರಬೇಕು. ಕಾನೂನು ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಧ್ವನಿ ವರ್ಧಕವನ್ನು ತಡರಾತ್ರಿವರೆಗೆ ಬಳಸುವಂತಿಲ್ಲ. ಮನರಂಜನೆ ಕಾರ್ಯಕ್ರಮಗಳ ವಿವರಣಾ ಪಟ್ಟಿಯನ್ನು ಬೀಟ್ ಪೊಲೀಸ್ ಅಥವಾ ಠಾಣೆಗೆ ನೀಡಬೇಕು. ಪಟಾಕಿ ಹಾಗೂ ಡಿಜೆ ಅಳವಡಿಸಿ ಮೆರವಣಿಗೆ ತೆರಳುವುದನ್ನು ನಿಷೇಧಿಸಲಾಗಿದೆ ಎಂದರು.
ಈದ್ ಮಿಲಾದ್ ಸಂಬಂಧ ಮುಸ್ಲಿಂ ಸಮುದಾಯದವರು ನಿಗದಿತ ಸ್ಥಳದಲ್ಲಿ ಸಾರ್ವಜನಿಕ ಪ್ರಾರ್ಥನೆ ನಡೆಸಬೇಕು. ಸೂಚಿತ ಮಾರ್ಗದಲ್ಲೆ ಮೆರವಣಿಗೆ ತೆರಳಬೇಕು ಎಂದರು.
ಎಎಸ್‌ಐ ರಾಮು, ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ, ನಿಲುವಾಗಿಲು ಪ್ರಭಾಕರ್, ರತ್ನಾಪುರಿ ಡೇವಿಡ್, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.