ಜಿಲ್ಲೆ

ಗಣೇಶ ವಿಸರ್ಜನೆ ಬಾವಿಗಳ ಸಿದ್ಧತೆ ಜೋರು, ಹುಬ್ಬಳ್ಳಿಯಲ್ಲಿ ನಾಲ್ಕು, ಧಾರವಾಡದಲ್ಲಿ ಎರಡು ಕಡೆ ವ್ಯವಸ್ಥೆ

Dharwada - Basavaraj Idli

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಗಣೇಶೋತ್ಸವವು ಪ್ರತಿ ವರ್ಷ ರಾಜ್ಯದ ಗಮನ ಸೆಳೆಯುತ್ತದೆ. ಬೃಹತ್ ಮೂರ್ತಿಗಳ ಪ್ರತಿಷ್ಠಾಪನೆ, ದೊಡ್ಡದೊಡ್ಡ ಪೆಂಡಾಲ್ ಹಾಕಿ ಪೌರಾಣಿಕ, ಆಧುನಿಕ ಘಟನಾವಳಿಗಳ ಪ್ರದರ್ಶನ ಏರ್ಪಡಿಸುವುದು, ಕಣ್ಣು ಕೋರೈಸುವ ದೀಪಾಲಂಕಾರ, 11 ದಿನಗಳ ಕಾಲ ಹಬ್ಬದ ವಾತಾವರಣ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತದೆ.

ಸಂಭ್ರಮದ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಸಜ್ಜುಗೊಂಡಿದೆ. ಮಹಾನಗರ ಪಾಲಿಕೆ ಕೂಡ ಗಣೇಶ ಮೂರ್ತಿ ವಿಸರ್ಜನೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಹುಬ್ಬಳ್ಳಿಯಲ್ಲಿ ನಾಲ್ಕು ಕಡೆ, ಧಾರವಾಡದಲ್ಲಿ ಎರಡು ಕಡೆ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಗೆ ಬಾವಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸದ್ಯ ಬಾವಿಯಲ್ಲಿ ನೀರು ಇಲ್ಲ. ಆದರೆ, ಬಾವಿ ಹಾಗೂ ಆವರಣದಲ್ಲಿ ವಿಸರ್ಜನೆ ಕಾರ್ಯಕ್ರಮ ವೀಕ್ಷಣೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಹುಬ್ಬಳ್ಳಿಯ ಹೊಸೂರ ಸರ್ಕಾರಿ ಶಾಲೆ ಬಳಿಯ ಹಳೆಯ ನೀರು ಸಂಗ್ರಹದ ಟ್ಯಾಂಕ್ ಬೃಹತ್ ಮೂರ್ತಿಗಳ ವಿಸರ್ಜನೆಗೆ ಸಜ್ಜುಗೊಳ್ಳುತ್ತಿದೆ. ಇದು ಹುಬ್ಬಳ್ಳಿ ಬಹುದೊಡ್ಡ ವಿಸರ್ಜನೆ ಬಾವಿ ಎನಿಸಿದೆ.

ಸದ್ಯ ನಾಲ್ಕು ಅಡಿ ನೀರು ಇದ್ದು, ಖಾಲಿ ಬಾಟಲಿ, ಕಸ, ಕಡ್ಡಿಗಳು ಬಿದ್ದಿವೆ. ಅವುಗಳನ್ನು ಕ್ಲೀನ್ ಮಾಡಬೇಕಿದೆ. ಟ್ಯಾಂಕ್ ಸುತ್ತಲೂ ಗ್ರಿಲ್ ಹಾಕಲಾಗಿದೆ. ಎರಡು ಕಡೆಗಳಲ್ಲಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ವೀಕ್ಷಣೆಗೆ ತಗಡಿನ ಶೆಡ್ ನಿಮಿರ್ಸಲಾಗಿದೆ. ಸಾರ್ವಜನಿಕರು ಇಲ್ಲಿ ಕುಳಿತುಕೊಂಡು ವೀಕ್ಷಿಸಬಹುದು.

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದ ಬಾವಿಯಲ್ಲಿಯೂ ನೀರಿಲ್ಲ. ಆದರೆ, ಸ್ವಚ್ಚಗೊಳಿಸಲಾಗಿದೆ. ಗಣೇಶೋತ್ಸವ ಆರಂಭವಾಗುತ್ತಿದ್ದಂತೆ ನೀರು ತುಂಬಿಸುವ ಯೋಜನೆಯನ್ನು ಮಹಾನಗರ ಪಾಲಿಕೆ ಹೊಂದಿದೆ. ಈ ಎರಡು ಕಡೆ ಹುಬ್ಬಳ್ಳಿಯ ಬಹಳಷ್ಟು ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ.

ಇದೇ ರೀತಿ ಹಳೇಹುಬ್ಬಳ್ಳಿ ಶ್ರೀನಗರ ಹಾಗೂ ನಾಗಶೆಟ್ಟಿಕೊಪ್ಪದಲ್ಲಿ ಒಂದೊಂದು ಬಾವಿ ಇದ್ದು, ಅವುಗಳನ್ನು ಸ್ವಚ್ಛಗೊಳಿಸಲಾಗಿದೆ. ಇವಿಷ್ಟಿದ್ದರೆ ಗಣೇಶ ವಿಗ್ರಹಗಳ ವಿಸರ್ಜನೆಗೆ ಯಾವುದೇ ತೊಂದರೆ ಇಲ್ಲ. ಹಾಗಾಗಿ ಈ ವರ್ಷ ವಿಸರ್ಜನೆ ವ್ಯವಸ್ಥೆಯನ್ನು ಮುಂಚಿತವಾಗಿ ಸರಿಪಡಿಸಿಕೊಳ್ಳಲಾಗುತ್ತಿದೆ.

ಇದಲ್ಲದೇ ಉಣಕಲ್ಲ ಕ್ರಾಸ್ ನಲ್ಲಿ ಸಂಚಾರಿ ಟ್ಯಾಂಕ್ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಮಹಾನಗರ ಯಾವುದೇ ಭಾಗದಲ್ಲಿ ಸಂಚಾರಿ ಟ್ಯಾಂಕರ್ನ ಬೇಡಿಕೆ ಇದ್ದರೆ ತಕ್ಷಣ ಪೂರೈಸಲು ಈಗಾಗಲೇ ವಲಯ ಕಚೇರಿ ಸಹಾಯಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ವಿಸರ್ಜನೆ ಬಾವಿಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಪಾಲಿಕೆ ಆಲೋಚನೆ ಮಾಡಿದೆ. ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಬೇಡಿಕೆಯಂತೆ ಕ್ರೇನ್ ಅಥವಾ ಸುಲಭವಾಗಿ ಮೂತಿರ್ಗಳನ್ನು ನೀರಿಗೆ ಇಳಿಸುವ ವ್ಯವಸ್ಥೆ ಮಾಡಲು ಪಾಲಿಕೆ ಮುಂದಾಗಿದೆ.