ಜಿಲ್ಲೆ

ಹುಬ್ಬಳ್ಳಿಯಲ್ಲಿ ಗಣೇಶನ ಸಂಭ್ರಮ, ಬೃಹತ್ ಮೂರ್ತಿಗಳ ಮೆರವಣಿಗೆ, ಪ್ರತಿಷ್ಠಾಪನೆ, ಅಲಂಕೃತ ಮಂಟಪದಲ್ಲಿ ವಿರಾಜಮಾನ ವಿನಾಯಕ

Dharwada - Basavaraj Idli

ಹುಬ್ಬಳ್ಳಿ: ಅದ್ದೂರಿ ಗಣೇಶೋತ್ಸವಕ್ಕೆ ಹೆಸರುವಾಸಿಯಾದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶನಿವಾರ ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿತ್ತು. ಭಾರತೀಯರ ಬಹು ದೊಡ್ಡ ಹಬ್ಬ ಎಂತಲೂ ಕರೆಯುವ ಗಣೇಶೋತ್ಸವವನ್ನು ನಗರದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ಮನೆಗಳಲ್ಲಿ ಮಂಟಪ ಅಲಂಕಾರ ಮಾಡಿ ಗೌರಿತನಯ ಗಣೇಶನನ್ನು ಬರಮಾಡಿಕೊಳ್ಳಲಾಯಿತು. ವಿದ್ಯುತ್ ದೀಪಾಲಂಕಾರ, ವೈವಿಧ್ಯಮಯ ಅಲಂಕಾರಿಕ ಸಾಮಗ್ರಿಗಳು, ತರಹೇವಾರಿ ಹೂಗಳು, ಬಲೂನ್ಗಳು, ಬಾಳೆ ಕಂಬ, ತಳಿರು ತೋರಣಗಳಿಂದ ಅಲಂಕೃತ ಮಂಟಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ಕುಟುಂಬದ ಸದಸ್ಯರೆಲ್ಲರೂ ಸೇರಿ ವಿಘ್ನ ವಿನಾಶಕನ ಆರಾಧನೆ ಮಾಡಿದರು. ಮಂತ್ರಘೋಷ, ಹಾಡುಗಳನ್ನು ಹೇಳಿ ಭಕ್ತಿ ಭಾವದಿಂದ ಶಿವಪಾರ್ವತಿಯರ ಪ್ರೇಮ ಪುತ್ರನನ್ನು ಪೂಜಿಸಿದರು. ಇಡೀ ದಿನ ಎಲ್ಲೆಡೆ ಗಣಪನ ಪೂಜೆ, ಆರಾಧನೆ ನಡೆಯಿತು.

ಮಕ್ಕಳು ಅತ್ಯಂತ ಉತ್ಸಾಹದಿಂದ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಗಣಪನ ನೈವೇದ್ಯಕ್ಕೆ ಸಿದ್ಧಪಡಿಸಿದ್ದ ಗೋಧಿ ಹುಗ್ಗಿ, ಸಿಹಿ ಪದಾರ್ಥ, ಕಡಬು, ಭಜಿ, ಸಂಡಿಗೆ, ಕರಿದ ಮೆಣಸಿನಕಾಯಿ, ಮುಂತಾದವುಗಳನ್ನು ಗಣರಾಜನಿಗೆ ಅರ್ಪಿಸಿದರು.

ಪೂಜೆ ನಂತರ ಮಕ್ಕಳು, ದೊಡ್ಡವರು ಎಲ್ಲರೂ ಸೇರಿ ತರಹೇವಾರಿ ಖಾದ್ಯಗಳನ್ನು ಸವಿದು ಖುಷಿಯಿಂದ ಹಬ್ಬದಾಚರಣೆಯಲ್ಲಿ ತೊಡಗಿದರು. ಮಕ್ಕಳಾದಿಯಾಗಿ ಎಲ್ಲರೂ ಪಟಾಕಿ ಸಿಡಿಸಿ ಆನಂದ ಪಟ್ಟರು.

ಸಂಜೆಯಾಗುತ್ತಿದ್ದಂತೆ ಮನೆಮನೆಗಳಲ್ಲಿ ಪ್ರತಿಷ್ಠಾಪಿತ ವಿಘ್ನ ವಿನಾಶಕನ ದರ್ಶನ ಪಡೆದು ಕೃತಾರ್ಥರಾದರು. ಮಹಿಳೆಯರು ಮನೆಗೆ ಬಂದ ಅತಿಥಿಗಳನ್ನು ಬರಮಾಡಿಕೊಂಡು ಪ್ರಸಾದ ವಿತರಿಸಿದರು.

ಇನ್ನು ಸಾರ್ವಜನಿಕ ಗಣೇಶ ಉತ್ಸವವು ಅದ್ದೂರಿಯಾಗಿ ಕೂಡಿತ್ತು. ಬೃಹತ್ ಗಣೇಶ ಮೂತಿರ್ಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಲಾಯಿತು. ವಿವಿಧ ವಾದ್ಯಮೇಳಗಳು, ಯುವಕರ ನೃತ್ಯ ಎಲ್ಲೆಡೆ ಕಂಡು ಬಂತು.

ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಗಣೇಶನ ಹಬ್ಬಕ್ಕೆ ಹುಬ್ಬಳ್ಳಿ ಸಜ್ಜುಗೊಂಡಿದೆ. ಹಲವು ಕಡೆಗಳಲ್ಲಿ ಬೃಹತ್ ಪೆಂಡಾಲ್, ಮಂಟಪಗಳನ್ನು ನಿರ್ಮಾಣ ಮಾಡಲಾಗಿದೆ.

ಇಲ್ಲಿಯ ದಾಜಿಬಾನಪೇಟ, ದುರ್ಗದಬೈಲ್, ಮರಾಠಾ ಗಲ್ಲಿ, ಹಿರೇಪೇಟ, ಸ್ಟೇಶನ್ ರಸ್ತೆ, ಸಿಬಿಟಿ, ಮಹಾತ್ಮ ಗಾಂಧಿ ಮಾರ್ಕೆಟ್, ಹಳೇಹುಬ್ಬಳ್ಳಿ, ವಿದ್ಯಾನಗರ, ಹೊಸೂರ ಮುಂತಾದ ಕಡೆಗಳಲ್ಲಿ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ ಗಣೇಶನ ಮಂಟಪದಲ್ಲಿ ನಿತ್ಯ ವಿಶೇಷ ಪೂಜೆ, ಆರಾಧನೆ ಜತೆಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಹುಬ್ಬಳ್ಳಿ ಧಾರವಾಡ ಮಾತ್ರವಲ್ಲ ಜಿಲ್ಲೆಯ ಎಲ್ಲ ಕಡೆಯಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಗಣೇಶನ ವೀಕ್ಷಣೆಗೆ ಭಕ್ತರು ಬರಲಿದ್ದಾರೆ. ಹಾಗಾಗಿ ಅತ್ಯಾಕರ್ಷಕ ಮಂಟಪ ಹಾಗೂ ಅಲಂಕಾರಗಳನ್ನು ಮಾಡಲಾಗಿದೆ. ಬಂದ ಭಕ್ತರ ಅನುಕೂಲಕ್ಕಾಗಿ ಬಹಳಷ್ಟು ಮಂಟಪಗಳಲ್ಲಿ ಪ್ರಸಾದ ನೀಡಲಾಗುತ್ತಿದೆ.