ಜಿಲ್ಲೆ

ವಿನಾಯಕ ಚೌತಿಗೆ ವಿನಾಯಿತಿ, ಆ.30ರ ಸಭೆಯಲ್ಲಿ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ಕರೊನಾ ನಿರ್ಬಂಧಗಳಿಂದ ವಿನಾಯಿತಿ ಬೇಡಿಕೆ ಬಗ್ಗೆ ಆ.30 ರಂದು ನಡೆಯಲಿರುವ ಸಚಿವರು, ತಜ್ಞರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯಕ್ಕೆ ಲಸಿಕೆ ಹಂಚಿಕೆ ಪ್ರಮಾಣ ಹೆಚ್ಚಿಸಬೇಕು ಎಂದು ವಿನಂತಿಸುವುದಕ್ಕಾಗಿ ದೆಹಲಿ‌ ಭೇಟಿ ಮುಖ್ಯ ಉದ್ದೇಶವಾಗಿತ್ತು.

ಕೇಂದ್ರ ಆರೋಗ್ಯ ಸಚಿವರು ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ದಾಸ್ತಾನು ಲಭ್ಯವಿದೆ. ಬಳಕೆಯಷ್ಟು ಹಂಚಿಕೆ ಮಾಡುವ ಭರವಸೆ ನೀಡಿದ್ದು, ಸೆಪ್ಟೆಂಬರ್ ಒಂದರಿಂದ ರಾಜ್ಯದಲ್ಲಿ ಪ್ರತಿದಿನ ಐದು ಲಕ್ಷ ಜನರಿಗೆ ಲಸಿಕೆ ವಿತರಣೆಗೆ ನಿರ್ಧರಿಸಲಾಗಿದೆ‌ ಎಂದು ಬೊಮ್ಮಾಯಿ‌ ತಿಳಿಸಿದರು.

ಬೃಹತ್ ಜವಳಿ ಪಾರ್ಕ್

ಕೇಂದ್ರ ಜವಳಿ ಸಚಿವ ಪಿಯೂಷ್ ಗೋಯಲ್ ಅವರಿಗೆ ಭೇಟಿಯಾದ ವೇಳೆ ರಾಜ್ಯದಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್ ಪ್ರಾರಂಭಿಸುವುದಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಅನುಮತಿ ನೀಡುವ ಜತೆಗೆ ಅಗತ್ಯ ನೆರವು ನೀಡಬೇಕೆಂಬ ವಿಷಯ ಪ್ರಸ್ತಾಪಿಸಿದ್ದು, ಗೋಯಲ್ ಉತ್ತಮವಾಗಿ ಸ್ಪಂದಿಸಿದ್ದಾರೆ.

ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಿ, ಮಂಜೂರಾತಿ ಜತೆಗೆ ಸೂಕ್ತ ಸಹಾಯಧನ ನೀಡಲಾಗುವುದು. ಅಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳನ್ನು ಆಕರ್ಷಿಸಿ ಬಂಡವಾಳ ಹೂಡಿ ಉದ್ಯಮ ನೆಲೆಗೊಳಿಸುವುದಕ್ಕೆ ಉತ್ತೇಜನ ನೀಡಲಾಗುವುದು ಎಂದು ಗೋಯಲ್ ಭರವಸೆ ನೀಡಿದ್ದಾರೆ.

ಬೃಹತ್ ಜವಳಿ ಪಾರ್ಕ್ ತಲೆ ಎತ್ತಿದರೆ, ಬಹು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಡಿಯಾಗಲಿವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಲಿವೆ ಎಂದು ಬೊಮ್ಮಾಯಿ‌ ಆಶಾಭಾವನೆ ವ್ಯಕ್ತಪಡಿಸಿದರು.