ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಕ ಜಂಬೂ ಸವಾರಿಯಲ್ಲಿ ರಾಜ್ಯದಲ್ಲಿ ಗಾಂಧಿ ನಡೆದಾಡಿದ ಜಿಲ್ಲೆಗಳ ಐತಿಹಾಸಿಕ ಸ್ಥಳಗಳು ಸ್ತಬ್ಧಚಿತ್ರದಲ್ಲಿ ಬಿಂಬಿತವಾದವು.
ನಾಡಹಬ್ಬದ ಮೆರವಣಿಗೆಯಲ್ಲಿ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ನಿರ್ಮಿಸಲಾಗಿದ್ದ, ಸ್ತಬ್ಧಚಿತ್ರದಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳ ಜತೆಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಅದರ ಅಡಿಯಲ್ಲಿ ಬರುವ ನಿಗಮಗಳ ಸ್ತಬ್ಧಚಿತ್ರಗಳದ್ದೇ ಪಾರುಪತ್ಯವಾಗಿತ್ತು.
ಕಳೆದ ಬಾರಿ 51 ಸ್ತಬ್ಧಚಿತ್ರಗಳು ಸಾಗಿದ್ದರೆ ಈ ಬಾರಿ 62 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಅಲ್ಲದೇ ಕಲಾತಂಡಗಳು ಹೆಚ್ಚಾಗಿದ್ದರಿಂದ ಮೆರವಣಿಗೆ ಉದ್ದವಾಗಿದ್ದು, ಪುಷ್ಪಾರ್ಚನೆಗೆ ಸಮಯ ಮೀರಿದ್ದರಿಂದ ಮೆರವಣಿಗೆ ವೇಗವಾಗಿ ತೆರಳಬೇಕಾಯಿತು.
ಬೆಳಗಾವಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಧಿವೇಶನ ನೂರು ವರ್ಷ ಪೂರೈಸಿದ್ದು, ಅದರ ಅಂಗವಾಗಿ ಗಾಂಧಿ ಮೈಸೂರಿನ ಬದನವಾಳು ಖಾದಿ ಕೇಂದ್ರಕ್ಕೆ ಭೇಟಿ ನೀಡಿದ್ದರ ನೆನಪಿಗಾಗಿ ಅಲ್ಲಿಯ ಖಾದಿ ಕೇಂದ್ರ ಸ್ತಬ್ಧ ಚಿತ್ರ ಬಿಂಬಿಸಲಾಗಿತ್ತು.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹ ಸೌಧ, ಗಾಂಧಿ ಚಿತಾಭಸ್ಮ ವಿಸರ್ಜಿಸಿದ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ, ಕೊಡಿಯಾಲದ ಕೈಮಗ್ಗದ ಮುಂದೆ ಗಾಂಧಿ ಚರಕ ನೂಲುವ ಸ್ತಬ್ಧಚಿತ್ರ ಸಾಗಿತು. ಧಾರವಾಡದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರ ಗರಗ ದೊಂದಿಗೆ ಗಾಂಧಿ ಪ್ರತಿಮೆ, ಚರಕ ನೂಲು ತೆಗೆಯುವುದಲ್ಲದೇ ಕಲಘಟಗಿ ಬಣ್ಣದ ತೊಟ್ಟಿಲು, ನವಲಗುಂದ ಜಮಖಾನ ಬಿಂಬಿಸಲಾಯಿತು. ಅಲ್ಲದೇ ಹಲವು ಜಿಲ್ಲೆಗಳು ಗಾಂಧಿಯ ಆಶಯದ ಹಲವು ಸಂದೇಶ ಸಾರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದವು.
ಬಿಂಬಿತವಾದ ಪಂಚ ಗ್ಯಾರಂಟಿಗಳು: ಗಾಂಧಿ ಸಂದೇಶ ಸಾರುವ ಸ್ತಬ್ಧಚಿತ್ರಗಳ ಜತೆಗೆ ಸರ್ಕಾರದ ಗ್ಯಾರಂಟಿಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಗಮನ ಸೆಳೆದವು. ಆರಂಭದಲ್ಲಿಯೇ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಅಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ನಿರ್ಮಿಸಿದ್ದ ಸ್ತಬ್ಧಚಿತ್ರ, ಯೋಜನೆಯ ಯಶೋಗಾಥೆ ತೆರೆದಿಟ್ಟಿತು. ವಿಶ್ವ ದಾಖಲೆ ನಿರ್ಮಿಸಿದ್ದ ಫಲಕ, ನಾಲ್ಕು ನಿಗಮಗಳ ಮಾಹಿತಿ, 560 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಫಲಕವನ್ನು ಬಿಂಬಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಅಡಿ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವ ನಿಧಿಯನ್ನು ಪರಿಚಯಿಸುವ ಮೂಲಕ ‘ಬೆಳಗುತ್ತಿದೆ ಭರವಸೆಯ ಬೆಳಕು’ ಎನ್ನುವ ಘೋಷಣೆ ಬಿಂಬಿಸಿತು. ಕೌಶಲಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮದಿಂದ ಪಂಚ ಗ್ಯಾರಂಟಿಗಳಲ್ಲಿ ಒಂದಾಗ ಯುವ ನಿಧಿಯ ಸೌಲಭ್ಯವನ್ನು ಪರಿಚಯಿಸಿತು.
ಸಮಾಜ ಕಲ್ಯಾಣ ಇಲಾಖೆ ಪ್ರತಿಬಿಂಬ: ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಜತೆಗೆ ಸಂಸತ್ತು, ಸಂವಿಧಾನ, ಇಲಾಖೆಯ ಯೋಜನೆಯನ್ನು ಬಿಂಬಿಸಲಾಯಿತು. ಅಲ್ಲದೇ ಇಲಾಖೆಯ ಅಡಿಯಲ್ಲಿ ಬರುವ ಕೇಂದ್ರ ಪರಿಹಾರ ಸಮಿತಿಯಿಂದ ನಿರಾಶ್ರಿತರಿಗಾಗಿ ಇರುವ ಯೋಜನೆ, ಭಿಕ್ಷಾಟನೆ ಮುಕ್ತ ಮೈಸೂರು ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರ ಸಾಗಿತು.
ಇಲಾಖೆಯ ಅಡಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕೆಆರ್‌ಇಐಎಸ್)ಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯ, ಮೂಲ ಶಿಕ್ಷಣದಿಂದ ಮೌಲ್ಯಾಧಾರಿತ ಶಿಕ್ಷಣದೆಡೆಗೆ ಸಂದೇಶದ ಸ್ತಬ್ಧಚಿತ್ರ ನಿರ್ಮಿಸಲಾಗಿತ್ತು.ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉದ್ಯಮಶೀಲ, ಸ್ವಯಂ ಉದ್ಯೋಗ, ಸಾರಥಿ, ಭೂ ಒಡೆತನ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ತೆರೆದಿಡಲಾಯಿತು. ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಅಲ್ಲದೇ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಸಮುದಾಯದವರಿಗೆ ದೊರೆಯುವ ಸೌಲಭ್ಯವನ್ನು ಪರಿಚಯಿಸಲಾಯಿತು.
ಗಮನ ಸೆಳೆದ ಇತರ ಕಲಾಕೃತಿಗಳು
ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನಿಂದ ‘ವಿಜಯದ ರನ್, ಭಾರತದ ಆಕಾಶಕ್ಕೆ ಎಚ್‌ಎಎಲ್‌ನ ಶಕ್ತಿ ಸ್ತಬ್ಧಚಿತ್ರ ಸಾಗುವ ಮೂಲಕ ಎಲ್ಲರ ಗಮನ ಸೆಳೆಯಿತು. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಆತ್ಮನಿರ್ಭರ ಭಾರತವನ್ನು ಮುನ್ನಡೆಸುತ್ತಿದೆ ರಕ್ಷಣಾ ಚಲನಶೀಲತೆಯನ್ನು ಬಿಂಬಿಸಿದರೆ, ಭಾರತೀಯ ರೈಲ್ವೆ ಇಲಾಖೆಯಿಂದ ವಿಶ್ವದಲ್ಲೇ ಅತಿ ಎತ್ತರದ ಚಿನಾಬ್ ಸೇತು ಹಾಗೂ ಪಂಬನ್ ಸೇತು ಸ್ತಬ್ಧಚಿತ್ರ ಸಾಗಿತು. ಭೋವಿ ಅಭಿವೃದ್ಧಿ ನಿಗಮದಿಂದ ಭೋವಿ ಸಮುದಾಯದ ಯೋಜನೆಗಳು, ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡಲು ಅನುಷ್ಠಾನಗೊಳಿಸಿರುವ ವಿವಿಧ ಕಾರ್ಯಕ್ರಮಗಳು ಗಮನ ಸೆಳೆದವು.
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಜ್ಞಾನಿ -ವಿಜ್ಞಾನಿಗಳ ನಾಡು, ನಗರಾಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್, ಶುದ್ದ ಕಾಳಜಿಯ ನಗರಗಳು, ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಾಸ್ಥ್ಯ ಮತ್ತು ಸುಸ್ಥಿರ ಮೈಸೂರು, ಧಾರವಾಡ ಜಿಲ್ಲೆಯಿಂದ ರಾಷ್ಟ್ರ ಧ್ವಜ ತಯಾರಿಕಾ ಕೇಂದ್ರ ಗರಗ ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ, ಉತ್ತರ ಕನ್ನಡ ಜಿಲ್ಲೆಯಿಂದ ರಾಣಿ ಚೆನ್ನಭೈರದೇವಿ ಮಸಾಲೆ ರಾಣೆ ಬಾಗಲಕೋಟೆ ಜಿಲ್ಲೆಯಿಂದ ಕೂಡಲಸಂಗಮ ಮತ್ತು ಶಿಲ್ಪಕಲೆಗಳ ನಾಡು, ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ, ಶಿವಮೊಗ್ಗ ಜಿಲ್ಲೆಯಿಂದ ಬೆಳ್ಳಿಗಾವೆಯ ಕೇದಾರೇಶ್ವರ ದೇವಸ್ಥಾನ ಗಮನ ಸೆಳೆದವು.
ಬಳ್ಳಾರಿ ಜಿಲ್ಲೆಯಿಂದ ಸೆಪ್ಟೆಂಬರ್‌ನಲ್ಲಿ ಸಂಡೂರು ನೋಡು, ವಿಜಯಪುರ ಜಿಲ್ಲೆಯಿಂದ ಶಿವನ ಪ್ರತಿಮೆ ಶಿವಗಿರಿ ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿಬಿಂಬಿಸುವ ಕಲೆ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕ್ರೀಡೆ, ತುಮಕೂರು ಜಿಲ್ಲೆಯಿಂದ ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ ನಮ್ಮ ತುಮಕೂರು ಜಿಲ್ಲೆ, ಉಡುಪಿ ಜಿಲ್ಲೆಯಿಂದ ಸ್ವಚ್ಛ ಉಡುಪಿ, ಕೊಡಗು ಜಿಲ್ಲೆಯಿಂದ ಕೊಡಗಿನ ಚಾರಣ ಪಥಗಳು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಅಭೂತಪೂರ್ವ ಸಾಧನ ತೆರೆದುಕೊಂಡಿತು.
ಹಾವೇರಿ ಜಿಲ್ಲೆಯಿಂದ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಘಾಟಿ ಸುಬ್ರಮಣ್ಯ ದೇವಸ್ಥಾನ, ದೇವನಹಳ್ಳಿ ಕೋಟೆ ಮತ್ತು ಕೆಂಪೇಗೌಡರ ವಿಗ್ರಹ, ಚಿಕ್ಕಮಗಳೂರು ಜಿಲ್ಲೆಯಿಂದ ಭದ್ರಾಬಾಲ್ಯ ಯೋಜನೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ -ಕರ್ನಾಟಕದಿಂದ ಡ್ರಗ್ಸ್ ಮುಕ್ತ ಕ್ಯಾಂಪಸ್ ಅಭಿಯಾನ, ಗದಗ ಜಿಲ್ಲೆಯಿಂದ ಜೋಡು ಕಳಸದ ಗುಡಿ, ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ)ಯಿಂದ ಚನ್ನಪಟ್ಟಣ ಗೊಂಬೆ, ಹೈನುಗಾರಿಕೆ ರೇಷ್ಮೆ ಯೋಜನೆಗಳು ತೆರೆದುಕೊಂಡವು.
ಬೆಂಗಳೂರು ನಗರ ಜಿಲ್ಲೆಯಿಂದ ಬ್ರಾೃಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ, ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಶುದ್ಧ ಇಂಧನ ಮತ್ತು ಸಂಪನ್ಮೂಲ ಸಂರಕ್ಷಣೆಯ ಮೂಲಕ ಗ್ರಾಮೀಣ ಭಾರತದ ಸಶಕ್ತೀಕರಣ, ಚಾಮರಾಜನಗರ ಜಿಲ್ಲೆಯಿಂದ ಪ್ರಕೃತಿಯ ಸೌರ್ಹದತೆಯೊಂದಿಗೆ ಪ್ರಗತಿಯತ್ತ ಸಾಗೋ, ಬೆಳಗಾವಿ ಜಿಲ್ಲೆಯಿಂದ ಶ್ರೀಮಹಾಕಾಳಿ ಮಾಯಕ್ಕಾ ದೇವಿ ದೇವಸ್ಥಾನ ಚಿಂಚಲಿ, ವಿಜಯನಗರ ಜಿಲ್ಲೆಯಿಂದ ವಿಶಿಷ್ಟ ವಿಜಯನಗರ-ವಿಜಯನಗರ ಜಿಲ್ಲೆಯ ವೈಶಿಷ್ಟ್ಯತೆಗಳು ಗಮನ ಸೆಳೆದವು.
ಹಾಸನ ಜಿಲ್ಲೆಯಿಂದ ಗೊಮ್ಮಟೇಶ್ವರ - ಕಾಫಿ, ಬೀದರ್ ಜಿಲ್ಲೆಯಿಂದ ಬೀದರ ಕೊಟೆ, ದಾವಣಗೆರೆ ಜಿಲ್ಲೆಯಿಂದ ಮನೆ ಮನೆಗೆ ಗಂಗೆ, ಚಿತ್ರದುರ್ಗ ಜಿಲ್ಲೆಯಿಂದ ರಾಜವೀರ ಮದಕರಿ ನಾಯಕ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಭವ್ಯ ಭವಿಷ್ಯ ನಿರ್ಮಿಸುವ ಕಾರ್ಯಪರಿಸರ, ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಉದ್ಯೋಗವಕಾಶ ಮತ್ತು ಸ್ವಾವಲಂಬನೆ, ಕಾರ್ಮಿಕ ಇಲಾಖೆಯಿಂದ ಇಲಾಖಾ ಕಾರ್ಯಕ್ರಮಗಳು, ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಕೌಶಲ್ಯ ಅಭಿವೃದ್ಧಿ ಯೋಜನೆಯಿಂದ ಚರ್ಮ ಕುಶಲಕರ್ಮಿಗಳ/ಚರ್ಮಗಾರಿಕೆಯ ಇತಿಹಾಸ ತಿಳಿಸಿಕೊಡಲಾಯಿತು.
ಕಾವೇರಿ ನೀರಾವರಿ ನಿಗಮದಿಂದ ಕರುನಾಡಿನ ಜೀವನಾಡಿ ನದಿಗಳಿಂದ ಸಮೃದ್ಧವಾದ ಕರುನಾಡು, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದಿಂದ ಕರ್ನಾಟಕದ ಹೆಮ್ಮೆಯ ಸಂಕೇತ ಮೈಸೂರು ರೇಷ್ಮೆ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಇಲಾಖಾ ಕಾರ್ಯಕ್ರಮಗಳು, ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಹಾಲಿನ ಶುಭ್ರತೆ... ನೀಡಿದೆ ರೈತ ಪರಿವಾರಕ್ಕೆ ಭದ್ರತೆ ಮತ್ತು ಹೈನೋದ್ಯಮದ ಮೂಲಕ ಮಹಿಳಾ ಸಬಲೀಕರಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಾಯಚೂರು ಜಿಲ್ಲೆಯಿಂದ ಸರ್ವ ಧರ್ಮ ಸಾಮರಸ್ಯದ ನೆಲೆಬೀಡು, ರಾಯಚೂರು, ಕೋಲಾರ ಜಿಲ್ಲೆಯಿಂದ ರೇಷ್ಮೆ, ಹೈನುಗಾರಿಕೆ ಮತ್ತು ಮಾವು, ಯಾದಗಿರಿ ಜಿಲ್ಲೆಯಿಂದ ಟೇಲರ್ ಮಂಜಿಲ್ 1844 ಸುರಪುರ, ಪ್ರವಾಸೋದ್ಯಮ ಇಲಾಖೆಯಿಂದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಅದ ಕಲಿಕಾ ನ್ಯೂನತೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜ್ಞಾನವೇ ಶಕ್ತಿ, ಶಿಕ್ಷಣವೇ ಆಸ್ತಿ ಎಂಬುದೇ ಸಂಸ್ಥೆಯ ಪರಮ ಧೈಯ ಬುದ್ಧಿವಂತಿಕೆ, ಸಮಾನತೆ, ಭರವಸೆಗಳೇ ಇಲಾಖೆಯ ಮೊದಲ ಆದ್ಯತೆ ನೀಡಲಾಗಿತ್ತು.
ಧ್ಯೇಯ ಬದಲಿಸಿಕೊಂಡ ಕಲಬುರ್ಗಿ
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಲಬುರ್ಗಿ ಜಿಲ್ಲಾ ಪಂಚಾಯಿತಿಯಿಂದ ಈ ಮೊದಲು ಶರಣ ಬಸವೇಶ್ವರ ಸಂಸ್ಥಾನ, ಮಹಾದಾಸೋಹಿ ಪೀಠ, ಬಹುಮನಿ ಸುಲ್ತಾನ ಸಾಮ್ರಾಜ್ಯ ಸ್ತಬ್ಧಚಿತ್ರ ನಿರ್ಧರಿಸಲಾಗಿತ್ತು. ಆದರೆ ಗಾಂಧಿ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರ ಇರಬೇಕು ಎಂದು ಮುಖ್ಯಮಂತ್ರಿ ತಿಳಿಸಿದ ಮೇರೆಗೆ ಮೆರವಣಿಗೆಯಲ್ಲಿ ಧ್ಯೇಯ ಬದಲಿಸಿಕೊಂಡು ಗ್ರಾಮ ಸ್ವರಾಜ್ಯದ ಸ್ತಬ್ಧಚಿತ್ರ ಸಾಗಿತು.