ಚನ್ನರಾಯಪಟ್ಟಣದ ಸರ್ಕಾರಿ ಪೇಟೆ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧಿ ಜೀವನ ಮತ್ತು ಸಾಧನೆ ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನು ನಾಗಪ್ಪ ಉದ್ಘಾಟಿಸಿದರು. ನೇತ್ರಾವತಿ, ದೇವರಾಜೇಗೌಡ, ಸತೀಶ್ ಇತರರು ಇದ್ದರು. 
ಜಿಲ್ಲೆ

ಗಾಂಧೀಜಿ ಬದ್ಧತೆ ವಿಶ್ವಕ್ಕೆ ಮಾದರಿ

ರವಿಕುಮಾರ್ ಪಿ. ಕೆ

ಚನ್ನರಾಯಪಟ್ಟಣ: ಗಾಂಧೀಜಿಯವರ ಬದ್ಧತೆ ಮತ್ತು ತತ್ವಗಳು ವಿಶ್ವಕ್ಕೆ ಮಾದರಿ ಎಂದು ನಿವೃತ್ತ ಸಹಾಯಕ ಆಯುಕ್ತ ನಾಗಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪೇಟೆ ಪ್ರೌಢಶಾಲೆಯಲ್ಲಿ ಗಾಂಧೀಜಿ ಜೀವನ ಮತ್ತು ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಶನಿವಾರ ಚಾಲನೆ ಅವರು ಮಾತನಾಡಿದರು.

ಹೋರಾಟದ ಜೀವನದಲ್ಲಿ ಅನೇಕ ಬಾರಿ ಅವಮಾನಕ್ಕೆ ಒಳಗಾದರೂ ಗಾಂಧೀಜಿ ಉತ್ಸಾಹದಿಂದಲೇ ಮುನ್ನಡೆದರು. ದಕ್ಷಿಣ ಆಫ್ರಿಕಾದಲ್ಲಿ ಅಧ್ಯಯನ ಮಾಡುವಾಗಿನಿಂದ ಅವರ ಹೋರಾಟ ಆರಂಭವಾಯಿತು. ಭಾರತಕ್ಕೆ ಹಿಂದಿರುಗಿದ ನಂತರವೂ ಜನ ಸಾಮಾನ್ಯರನ್ನು ಸಂಘಟಿಸಿದರು. ಸ್ವದೇಶಿ ಮಂತ್ರ ಜಪಿಸಿದರು. ಅದನ್ನೇ ಜನರಿಗೂ ತಿಳಿ ಹೇಳಿದರು. ದೇಶದ ನಾಯಕತ್ವ ವಹಿಸುವ ಗುಣ ಅವರಲ್ಲಿ ಇತ್ತು. ಒಂದು ಗ್ರಂಥ ತಿಳಿಸುವ ಸಂದೇಶವನ್ನು ಒಂದು ಛಾಯಾಚಿತ್ರ ನೀಡುತ್ತದೆ ಎಂದವರು ಹೇಳಿದರು.

ಮುಖ್ಯ ಶಿಕ್ಷಕಿ ನೇತ್ರಾವತಿ ಮಾತನಾಡಿ, ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಪ್ರತೀಕವಾಗಿದ್ದರು. ಇಂದಿನ ಯುವ ಪೀಳಿಗೆ ಅವರ ಆದರ್ಶ ಅನುಸರಿಸಬೇಕು. ಅದಕ್ಕಾಗಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.