ಜಿಲ್ಲೆ

ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಗಾಂಧೀಜಿ

ಧಾರವಾಡ: ರಾಷ್ಟ್ರಪಿತ ಗಾಂಧೀಜಿ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಮಹಾನ್ ಮಾನವತಾವಾದಿಗಳು. ಅವರ ಸ್ಮರಣೆ ಪುಣ್ಯದ ಕಾರ್ಯ ಎಂದು ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್‌ಬಹದ್ದೂರ ಶಾಸೀ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿ-ಲಾಲ್‌ಬಹದ್ದೂರ ಶಾಸಿ ಅವರು ಸರಳ ಜೀವನ ನಡೆಸುವುದರ ಮೂಲಕ ಉನ್ನತ ಚಿಂತನೆಗಳನ್ನು ಹೊಂದಿದವರು. ಇಬ್ಬರೂ ವ್ಯಕ್ತಿಗಳು ಮಾತ್ರವಲ್ಲ ದಿವ್ಯಶಕ್ತಿ. ಇವರು ಸತ್ಯ, ಪ್ರಾಮಾಣಿಕತೆ, ನೈತಿಕತೆಯ ಮೇರು ವ್ಯಕ್ತಿಗಳಾಗಿದ್ದರು. ಅವರಿರ್ವರ ಚಿಂತನೆಗಳು ಮನುಕುಲದ ಮೇಲೆ ಗಾಢ ಪ್ರಭಾವ ಬೀರಿವೆ ಎಂದರು.

ಕ.ವಿ.ವ. ಸಂಘವು ಗಾಂಧೀಜಿ ಅವರ ಚಿಂತನೆಗಳನ್ನು ಯುವಕರಲ್ಲಿ ಬಿಂಬಿಸಲು ಗಾಂಧೀಜಿಯ ಬಗ್ಗೆ ಸರಣಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಭವಿಷ್ಯದಲ್ಲಿ ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಹಿರಿಯ ಛಾಯಾಚಿತ್ರಗ್ರಾಹಕ ಶಶಿ ಸಾಲಿ ಮಾತನಾಡಿ, ಇಂತಹ ಪ್ರಾತಃಸ್ಮರಣೀಯರ ಜೀವನ ಸಾಧನೆ ಕುರಿತ ಚಿಂತನೆಗಳು ಕ.ವಿ.ವ. ಸಂಘದಲ್ಲಿ ಆಯೋಜಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುವಂತಾಗಬೇಕು. ಇಂದಿನ ಯುವಕರು ಕವಲು ದಾರಿಯಲ್ಲಿದ್ದು ಗಾಂಧೀಜಿ ತತ್ವಗಳೇ ಪರಿಹಾರವಾಗಿವೇ ಎಂದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಗಾಂಧೀಜಿ ಹಾಗೂ ಶಾಸೀಜಿಯವರ ಚಿಂತನೆಗಳು ಹಿಂದಿಗಿಂತ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸ್ತುತ. ಇಬ್ಬರು ವಿಶ್ವ ಮಾನವ ಚಿಂತನೆ ಹೊಂದಿದ ವ್ಯಕ್ತಿಗಳು ಎಂದರು.

ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ವಿಶ್ವೇಶ್ವರಿ ಹಿರೇಮಠ, ಡಾ.ಧನವಂತ ಹಾಜವಗೋಳ, ಈಶ್ವರಚಂದ್ರ ಹೊಸಮನಿ, ಬಿ.ಕೆ. ಹೊಂಗಲ, ಶಿ.ಮ.ರಾಚಯ್ಯನವರ ಸಂಘದ ಸಿಬ್ಬಂದಿ ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ವಂದಿಸಿದರು.