ಜಿಲ್ಲೆ

ಗಾಂಧೀಜಿ ದೇಶ ನೆನಪಿಡುವ ಐಕಾನ್

ಧಾರವಾಡ: ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಸ್ವದೇಶಿ ಚಳುವಳಿ ಸೇರಿ ಅನೇಕ ಹೋರಾಟಗಳಲ್ಲಿ ಮಹಾತ್ಮ ಗಾಂದೀಜಿ ಅವರು ಭಾಗವಹಿಸಿದ್ದರು. ಆಂದೋಲನವನ್ನು ಜನಾಂದೋಲವಾಗಿ ಪರಿವರ್ತಿಸಿದರು. ಜನ ಸಾಮಾನ್ಯರಿಂದ ಹೋರಾಟ ನಡೆಸಿದರು. ಅನೇಕ ಸತ್ಯಾಗ್ರಹಗಳನ್ನು ಜನಾಂದೋಲದಿಂದ ನಡೆಸಿದ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ.ಅವರು ದೇಶ ನೆನಪಿಡುವ ಐಕಾನ್ ಆಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಗಾಂಧಿ ಭವನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಹು-ಧಾ ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 156ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಾಂಧೀಜಿ 156ನೇ ಹಾಗೂ ಲಾಲ್ ಬಹಾದ್ದೂರ್ ಶಾಸಿ ಅವರ 124ನೇ ಜಯಂತಿ ನಾವು ಆಚರಿಸುತ್ತಿದ್ದೇವೆ. ಲಾಲ್ ಬಹಾದ್ದೂರ್ ಶಾಸಿ ಅವರು ಪ್ರಧಾನ ಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದರು. ತಾಷ್ಕೆಂಟ್ ಒಪ್ಪಂದದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಶಾಸಿಯವರು ಜೀವನದ ನೈತಿಕತೆ ತಿಳಿದು ಜೀವನ ಸವೆಸಿದ್ದಾರೆ ಎಂದರು.

ಉತ್ತರ ಭಾರತದಲ್ಲಿ ಪೇಟಾ ಹಾಕುವುದು ಸಾಮಾನ್ಯವಾಗಿತ್ತು. ಅದನ್ನು ಬ್ರಿಟಿಷರು ತೆಗೆದು ಹಾಕಿದರು. ಅನಂತರದಲ್ಲಿ ಗಾಂಧೀಜಿಯವರು ಟೋಪಿಗೆ ಹೆಚ್ಚಿನ ಮಹತ್ವ ತಂದುಕೊಟ್ಟರು. ನಂತರದ ದಿನಗಳಲ್ಲಿ ಗಾಂಧಿ ಟೋಪಿ ಎಂದು ಖ್ಯಾತಿ ಪಡೆದುಕೊಂಡಿತು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗಾಂಧೀಜಿ ಅವರು ಸತ್ಯ, ಸ್ವಚ್ಛತೆ ಮತ್ತು ಗ್ರಾಮ ಸ್ವ-ರಾಜ್ಯದ ಸಂಕಲ್ಪಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ತಂದುಕೊಟ್ಟರು. ಅವರ ರಾಜಕೀಯ ಆಡಳಿತ ವ್ಯವಸ್ಥೆ ನಮಗೆ ಮಾದರಿಯಾಗಿದೆ. ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ನಡೆದರು. ಸತ್ಯಾಗ್ರಹ ಮನೋಭಾವನೆ ಮೈಗೂಡಿಸಿಕೊಳ್ಳಬೇಕು. ಗ್ರಾಮ ಸ್ವರಾಜ್ಯದ ಸಂಕಲ್ಪ ಹಾಗೂ ಅಧಿಕಾರ ವೀಕೇಂದ್ರಿಕರಣ ವ್ಯವಸ್ಥೆಗೆ ಬುನಾದಿ ಹಾಕಿದರು. ಪ್ರಜಾಪ್ರಭುತ್ವ ಗಟ್ಟಿಯಾಗಲು ಗ್ರಾಮ ವ್ಯವಸ್ಥೆ ಮುಖ್ಯ. ಆರ್ಥಿಕ, ಸಾಮಾಜಿಕ ಸಮಾನತೆಗೆ ಮುಂದಾಗಬೇಕು ಎಂದರು.

ಧಾರವಾಡ ಸಿದ್ಧವೀರ ಸತ್ಸಂಗದ ಅಧ್ಯಕ್ಷ, ಗಾಂಧಿ ಚಿಂತಕ ಡಾ.ನಿತಿನ್‌ಚಂದ್ರ ಹತ್ತೀಕಾಳ ಮಾತನಾಡಿ, ಗಾಂಧೀಜಿ ರಾಷ್ಟ್ರಕ್ಕೆ ಸಿಮೀತವಾದ ವ್ಯಕ್ತಿ ಅಲ್ಲ. ಅವರು ವಿಶ್ವಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಜಯಸಿದರು. ಅಲ್ಲಿಂದ ಮರಳಿ ಭಾರತಕ್ಕೆ ಹಿಂತಿರುಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮಕಿದರು. ಮಹಾತ್ಮಾ ಎಂಬ ಹೆಸರು ಪಡೆದುಕೊಂಡರು. ಆಲ್ಬರ್ಟ್ ಐನಸ್ಟಿನ್ ಅವರು ಗಾಂಧೀಜಿ ಅವರನ್ನು ಹಾಡಿ ಹೊಗಳಿದ್ದಾರೆ. ಯೇಸುಕ್ರಿಸ್ತ ಮೊದಲ ದೇವರಾದರೆ, ಗಾಂಧೀಜಿ ನನಗೆ ಬದುಕುವ ಕಲೆ ಕಲಿಸಿದ 2ನೇ ದೇವರಾಗಿದ್ದಾರೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದಾರೆ. ಗಾಂಧೀಜಿಯವರ ಹತ್ಯೆ ನಡೆದ ದಿನ ವಿಶ್ವಸಂಸ್ಥೆಯ ಗೊತ್ತುವಳಿಯಿಂದ ಎಲ್ಲ ರಾಷ್ಟ್ರಗಳ ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಯಿತು ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು. ವಿವಿಧ ಧರ್ಮಗುರುಗಳಾದ ಡೇವಿಡ್, ಹಫೀಜ್ ಖಾದ್ರಿ ಮತ್ತು ಮಹೇಶ ಭಟ್ ಅವರು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು.

ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಡಿಪಿಐ ಎಸ್.ಎಸ್.ಕೆಳದಿಮಠ, ಡಾ.ಸಂಜೀವ ಕುಲಕರ್ಣಿ, ಡಾ.ರಾಜೇಂದ್ರ ಪೊದ್ದಾರ ಇತರರಿದ್ದರು. ಡಾ.ಎಸ್.ಎಂ.ಹಿರೇಮಠ ಸ್ವಾಗತಿಸಿದರು. ಭಾರ್ಗವಿ ಕುಲಕರ್ಣಿ ಮತ್ತು ತಂಡದವರು ನಾಡಗೀತೆ, ಗಾಂಧಿ ಭಜನೆ ಪ್ರಸ್ತುತ ಪಡಿಸಿದರು. ಶಶಿರೇಖಾ ಚಕ್ರಸಾಲಿ ಅತಿಥಿ ಪರಿಚಯಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

ಬಾಪೂಜಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ, ನಗದು ಪುರಸ್ಕಾರ ವಿತರಿಸಲಾಯಿತು.