ಜಿಲ್ಲೆ

ಗಾಂಧಿ ವಿಚಾರಧಾರೆ ಸರ್ಕಾರ, ಆಡಳಿತದ ಮೂಲ ತತ್ವ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾತ್ಮ ಗಾಂಧೀಜಿ ಬದುಕಿದ ರೀತಿ, ಹೋರಾಟದ ಗತಿ ಮತ್ತು ಅವರು ಬೋಧಿಸಿ, ಪಾಲಿಸಿದ ತತ್ವ, ಜೀವನ ಸಂದೇಶಗಳು ಇಂದಿನ ಸರ್ಕಾರಗಳ ಮತ್ತು ಆಡಳಿತದ ಮೂಲ ತತ್ವಗಳಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹೇಳಿದರು.

ಇಲ್ಲಿನ ಕುಮಾರೇಶ್ವರ ನಗರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೂತನವಾಗಿ ನಿಮಿರ್ಸಿರುವ ಗಾಂಧಿ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ತತ್ವ ಸಿದ್ಧಾಂತ, ಜೀವನ ಸಂದೇಶಗಳನ್ನು ಜನರಿಗೆ, ಯುವ ಸಮೂಹಕ್ಕೆ ತಲುಪಿಸಲು ವಿವಿಧ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದೇ ಕಾರಣಕ್ಕೆ ಪ್ರತಿ ಜಿಲ್ಲೆಯಲ್ಲಿ ಗಾಂಧಿ ಭವನ ನಿರ್ಮಿಸಲು ತಿರ್ಮಾನಿಸಿ, 2016-17ನೇ ಸಾಲಿನ ಬಜೆಟ್​ದಲ್ಲಿ ಗಾಂಧಿ ಭವನ ನಿರ್ಮಾಣ ಕುರಿತು ಘೋಷಿಸಿದ್ದರು. ಪ್ರತಿ ಜಿಲ್ಲೆಗೆ ಉಚಿತ ಅಗತ್ಯ ನಿವೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದರು. ವಾರ್ತಾ ಇಲಾಖೆಯಿಂದ 3 ಕೋಟಿ ರೂ. ಅನುದಾನ ಸಹ ಬಿಡುಗಡೆ ಮಾಡಲಾಗಿತ್ತು. ಅದರಂತೆ ಭವನ ಅತೀ ಸುಂದರವಾಗಿ ರೂಪುಗೊಂಡಿದೆ ಎಂದರು.

ಶಾಸಕ ಎನ್​.ಎಚ್​.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್​.ಆರ್​. ಪಾಟೀಲ, ಸುಜಾತಾ ಕಾಳೆ, ಡಾ. ಶಶಿಧರ ಚನ್ನಪ್ಪಗೌಡರ, ತಹಸೀಲ್ದಾರ ಡಾ. ಡಿ.ಎಚ್​. ಹೂಗಾರ, ಗಾಂಧಿ ಅನುಯಾಯಿಗಳಾದ ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶ್ರೀಶೈಲ ಕಮತರ, ಇತರರು ಇದ್ದರು.

ವಾರ್ತಾ ಇಲಾಖೆ ಬೆಳಗಾವಿ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಸಹಾಯಕ ಅಧಿಕಾರಿ ಡಾ. ಸುರೇಶ ಹಿರೇಮಠ ವಂದಿಸಿದರು.