ಜಿಲ್ಲೆ

ತೆರಕಣಾಂಬಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯು ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ತೆರಕಣಾಂಬಿ ಮತ್ತು ತೆರಕಣಾಂಬಿ ಹುಂಡಿ ಸೇರಿ ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ. ಅಲ್ಲದೇ ಪ್ರತಿ ಗುರುವಾರ ನಡೆಯುವ ಸಂತೆ, ಪ್ರತಿ ದಿನ ನಡೆಯುವ ತರಕಾರಿ ಹರಾಜು ಕಟ್ಟೆಗಳಿಗೆ ಸಾವಿರಾರು ರೈತರು ಆಗಮಿಸುತ್ತಾರೆ. ಗ್ರಾಮದಲ್ಲಿ ನಾಡಕಚೇರಿ, ಅಂಚೆ ಕಚೇರಿ, ದೂರವಾಣಿ ವಿನಿಮಯ ಕೇಂದ್ರ, ಪೊಲೀಸ್ ಠಾಣೆ, ಎರಡು ಬ್ಯಾಂಕುಗಳು ಇದ್ದು ಪ್ರಮುಖ ಹೋಬಳಿ ಕೇಂದ್ರವಾಗಿದೆ.


ಏಳು ಅಂಗನವಾಡಿ ಕೇಂದ್ರಗಳು, ಮೂರು ಪ್ರಾಥಮಿಕ, ಒಂದು ಉನ್ನತೀಕರಿಸಿದ ಪ್ರಾಥಮಿಕ, ಎರಡು ಪ್ರೌಢ, ಪಿಯುಸಿ ಮತ್ತು ಪದವಿ ಕಾಲೇಜುಗಳು, ಮುರಾರ್ಜಿ ವಸತಿ ಶಾಲೆ ಹಾಗೂ ಐಟಿಐ ಕಾಲೇಜುಗಳಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕುವುದರಿಂದ ಹೋಬಳಿ ಅಲ್ಲದೆ ತಾಲೂಕಿನ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿ ಶಿಕ್ಷಣ ಪಡೆಯುತ್ತಿದ್ದಾರೆ.


ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ ಹಾಗೂ ಕಸ ವಿಲೇವಾರಿಗೆ ಆದ್ಯತೆ, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ, ಎಲ್ಲ ಶಾಲೆಗಳಿಗೂ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ಪಾತ್ರೆಗಳ ವಿತರಣೆ, ಮುರಾರ್ಜಿ ವಸತಿ ಶಾಲೆಗೆ ಆಟದ ಮೈದಾನ ಹಾಗೂ ಫುಟ್‌ಬಾಲ್ ಕೋರ್ಟ್ ನಿರ್ಮಾಣ, ಕುಸಿದು ಬೀಳುವಂತಿದ್ದ ಗ್ರಂಥಾಲಯ ನವೀಕರಣ ಮತ್ತು ಡಿಜಿಟಲೀಕರಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಂದ ಪಂಚಾಯಿತಿಗೆ ಗಾಂಧಿಗ್ರಾಮ ಪುರಸ್ಕಾರ ದೊರಕಿದೆ ಎಂದು ಗ್ರಾಪಂ ಅಧ್ಯಕ್ಷ ವೆಂಕಟೇಶ್ ಸಂತಸ ವ್ಯಕ್ತಪಡಿಸಿದ್ದಾರೆ.