ಜಿಲ್ಲೆ

ದೇಶಕ್ಕೆ ಗಾಂಧಿ, ಶಾಸ್ತ್ರಿ ಕೊಡುಗೆ ಅನನ್ಯ

ಮದ್ದೂರು: ಗ್ರಾಮ ಸ್ವರಾಜ್ಯ ಕನಸು ಕಂಡ ಮಹಾತ್ಮ ಗಾಂಧೀಜಿ ಹಾಗೂ ಜೈ ಜವಾನ್ ಜೈ ಕಿಸಾನ್ ಉದ್ಘೋಷ ಹೇಳಿದ ಲಾಲ್ ಬಹಾದೂರ್ ಶಾಸ್ತ್ರಿ ಇಬ್ಬರು ಮಹಾನ್ ನಾಯಕರು. ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಬಣ್ಣಿಸಿದರು.

ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಇಬ್ಬರು ಮಹಾನ್ ನಾಯಕರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಬ್ಬರು ಮಹಾನ್ ದೇಶಪ್ರೇಮಿಗಳಾಗಿದ್ದು, ದೇಶಕ್ಕಾಗಿ ನಿರಂತರ ಹೋರಾಟ ಮಾಡಿ ಹುತಾತ್ಮರಾದ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಹಾತ್ ಗಾಂಧೀಜಿ ಸತ್ಯ ಮತ್ತು ಅಹಿಂಸೆ ಪ್ರತಿಪಾಸುವ ಜತೆಗೆ ದೇಶ ಮುನ್ನಡೆಯಬೇಕಾದರೆ ಮೊದಲು ಗ್ರಾಮ ಸ್ವರಾಜ್ಯ ಆಗಬೇಕು ಎಂಬ ಕನಸು ಕಂಡಿದ್ದರು. ಸತ್ಯಾಗ್ರಹಗಳ ಮೂಲಕ ಎಂತಹ ಶಕ್ತಿಗಳನ್ನು ಹೆದುರಿಸುವ ಆತ್ಮಸ್ಥೈರ್ಯ ತುಂಬಿ ಮೂಲ ಹಕ್ಕುಗಳನ್ನು ಪಡೆಯಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಮಹಾನ್ ಹೋರಾಟಗಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸ್ವಾತಂತ್ರೃಕ್ಕಾಗಿ ಹೋರಾಟ ಮಾಡಿದ ಮಹಾಪುರುಷರಲ್ಲಿ ಒಬ್ಬರಾಗಿ ದೇಶದ ಎರಡನೇ ಪ್ರಧಾನ ಮಂತ್ರಿಯಾಗಿ ಜೈ ಜವಾನ್ ಜೈ ಕಿಸಾನ್ ಉದ್ಘೋಷ ಹಾಕಿದ ಲಾಲ್ ಬಹಾದೂರ್ ಶಾಸ್ತ್ರಿ ಅವರ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಶಿಕ್ಷಕ ಚಂದ್ರು, ವೇದಿಕೆಯ ಜಿಲ್ಲಾ ಪ್ರದಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಗ್ರಾಪಂ ಸದಸ್ಯ ವಿ.ಎಚ್.ಶಿವಲಿಂಗಯ್ಯ, ಮುಖಂಡರಾದ ಎಂ.ವೀರಪ್ಪ, ಪಟೇಲ್ ಹರೀಶ್, ಪ್ರಕಾಶ್, ಅಪ್ಪಿ ಜಯರಾಮು, ಶ್ರೀನಿವಾಸ ಇದ್ದರು.