ಜಿಲ್ಲೆ

ಗಾಂಧಿ ಜಯಂತಿ; ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಚರಿಸುವ ಗಾಂಧಿ ಜಯಂತಿ ನಿಮಿತ್ತ ವಿದ್ಯಾರ್ಥಿ ಹಾಗೂ ಯುವ ಜನರಲ್ಲಿ ಮಹಾತ್ಮ ಗಾಂಧೀಜಿ ಅವರ ಬದುಕು, ಸ್ವಾತಂತ್ರ್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ, ಪ್ರಯೋಗಗಳು ಕುರಿತು ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರೌಢ ಶಾಲಾ ವಿಭಾಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಗಾಂಧೀಜಿಯವರ ವಿಚಾರದಲ್ಲಿ ಸತ್ಯಾಗ್ರಹ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ, ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ ವಿಷಯಗಳಲ್ಲಿ ಒಂದು ವಿಷಯ ಕುರಿತು ಸುಮಾರು 900 ಪದಗಳಿಗೆ ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ದೇಶದ ಕಳಂಕವಾದ ಅಸ್ಪೃಶ್ಯತೆ ನಿವಾರಿಸುವಲ್ಲಿನ ಗಾಂಧೀಜಿ ಪ್ರಯೋಗಗಳು, ಗಾಂಧೀಜಿಯವರನ್ನು ಜಗತ್ತು ಗ್ರಹಿಸಿದ ರೀತಿ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ ವಿಷಯಗಳ ಪೈಕಿ ಒಂದು ವಿಷಯವನ್ನು 1500 ಪದಗಳಿಗೆ ಮೀರದಂತೆ ಬರೆಯಬೇಕು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಇಂದಿನ ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹದ ಮಹತ್ವ, ದೇಶ ನಿರ್ಮಾಣದಲ್ಲಿ ಗಾಂಧೀಜಿಯವರ ಜಾತ್ಯಾತಿತ ನಿಲುವುಗಳು, ಗಾಂಧೀಜಿಯವರ ಧಾರ್ಮಿಕ ಸಹಿಷ್ಣುತೆ ಚಿಂತನೆ, ಸ್ವಾತಂತ್ರ್ಯ ಮತ್ತು ಸಮಾನತೆ ಪರಿಕಲ್ಪನೆಗಳು, ಗಾಂಧೀಜಿಯವರ ವಿಚಾರದಲ್ಲಿ ಸತ್ಯದ ಪರಿಕಲ್ಪನೆ, ಗಾಂಧೀಜಿಯವರು ಕಂಡ ಸ್ವರಾಜ್ಯ ಮತ್ತು ಆರ್ಥಿಕ ಚಿಂತನೆಗಳಲ್ಲಿ ಒಂದು ವಿಷಯದಲ್ಲಿ ಸುಮಾರು 2000 ಪದಗಳಿಗೆ ಮೀರದಂತೆ ಬರೆಯಬೇಕು.
ಸೆ. 6ರೊಳಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಸ್ಪರ್ಧೆ ಏರ್ಪಡಿಸಿ ಸೆ. 10ರೊಳಗೆ ಮೌಲ್ಯಮಾಪನ ಮಾಡಿ, ವಿಜೇತರ ವಿವರಗಳು ಹಾಗೂ ಪ್ರಬಂಧಗಳನ್ನು ಕೇಂದ್ರ ಕಚೇರಿಗೆ ಕಳುಹಿಸಲಿದೆ. ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ, ರಾಜ್ಯಮಟ್ಟದ ಫಲಿತಾಂಶ ಘೋಷಿಸಲಾಗುವುದು.
ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು ಪ್ರಬಂಧಗಳಿಗೆ ಅ. 2ರಂದು ಜಿಲ್ಲಾ ಮಟ್ಟದ ಗಾಂಧಿ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು. ಪ್ರಬಂಧ ಸಂರ್ಪೂಣ ಸ್ವರಚಿತವಾಗಿರಬೇಕು. ಪ್ರಬಂಧ ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಂದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.