ಜಿಲ್ಲೆ

ಅ.2ರಂದು ಗಾಂಧಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರ: ಎಡಿಸಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ಅ.2ರಂದು ನಗರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಬಳಿಕ ರಕ್ತದಾನ ಶಿಬಿರ ನಡೆಯಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮಂಡ್ಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ನೆಲದನಿ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದರು.

ಸರ್ವಧರ್ಮ ಪ್ರಾರ್ಥನೆ, ಭಜನೆ, ರಾಷ್ಟ್ರಗೀತೆ, ನಾಡಗೀತೆ, ಉಪನ್ಯಾಸ, ರಕ್ತದಾನ ಮಾಡುವವರಿಗೆ ಪ್ರಮಾಣ ಪತ್ರ ನೀಡುವುದು ಸೇರಿದಂತೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯಬೇಕು. ರಕ್ತದಾನ ಮಾಡಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ರಕ್ತದಾನ ಶಿಬಿರದಲ್ಲಿ ಆಸಕ್ತ, ಅರ್ಹ ಸಾರ್ವಜನಿಕರು, ಯುವಕ, ಯುವತಿಯರು ಹೆಚ್ಚಿನ್ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಕೋರಿದ ಅವರು, ಅಂದು ಜಿಲ್ಲಾಮಟ್ಟದ ಹಾಗೂ ಮಂಡ್ಯ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುವುದು ಕಡ್ಡಾಯ. ಜಿಲ್ಲೆಯಲ್ಲಿ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು ಹಾಗೂ ಪದವಿ/ಸ್ನಾತಕೋತ್ತರ 3 ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ವಿವರಿಸಿದರು.

ಸಭೆಯಲ್ಲಿ ಯುವಜನ ಸೇವಾ ಮತ್ರು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ನೆಹರು ಯುವ ಕೇಂದ್ರದ ರವಿಚಂದ್ರನ್, ಹರ್ಷ, ನೆಲದನಿ ಬಳಗದ ಅಧ್ಯಕ್ಷ ಲಂಕೇಶ್, ಎನ್‌ಎಸ್‌ಎಸ್ ಜಿಲ್ಲಾ ಸಂಯೋಜನಾಧಿಕಾರಿ ಡಾ.ಎಂ.ಕೆಂಪಮ್ಮ ಇತರರಿದ್ದರು.