ಮಂಡ್ಯ: ಬೇರೆ ದೇಶದ ಜನರು ಮಹಾತ್ಮ ಗಾಂಧೀಜಿ ಅವರನ್ನು ಮಹಾತ್ಮ ಎಂದು ಕರೆಯುತ್ತಾರೆ. ಭಾರತೀಯರಾದ ನಾವು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ವಿಷಾದಿಸಿದರು
ನಗರದ ಕಾವೇರಿ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೇರಾ ಯುವ ಭಾರತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸೇವಾದಳ, ನಗರಸಭೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರಪತಿ ಮಹಾತ್ಮ ಗಾಂಧಿ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಫೋಟೋ, ಪುಸ್ತಕಗಳಿಗೆ ಸೀಮಿತವಾಗಿಡದೆ, ಅವರ ಕುರಿತು ನಾವು ಎಷ್ಟು ತಿಳಿದುಕೊಂಡಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಯುದ್ಧವನ್ನು ಮಾಡದೆ ಶಾಂತಿ, ಸಹನೆ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸಿದ ದೇಶವೆಂದರೆ ಅದು ಭಾರತ. ನಮ್ಮ ಮಕ್ಕಳಿಗೆ ಮಹಾತ್ಮ ಗಾಂಧೀಜಿ ಯವರ ಸಾಧನೆಯನ್ನು ತಿಳಿಸಬೇಕು ಎಂದರು.
ಹುಟ್ಟಿನಿಂದ ಗಾಂಧೀಜಿ ಮಹಾತ್ಮ ಆಗಲಿಲ್ಲ. ಬದಲಿಗೆ ಮಾಡಿದ ಸಾಧನೆಗಳಿಂದ ಮಹಾತ್ಮರೆಂಬ ಬಿರುದು ಪಡೆದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂದು ಅಂದು ದೇಶದಲ್ಲಿದ್ದ 33 ಕೋಟಿ ಜನರನ್ನು ಸಹ ಅಹಿಂಸಾ ತತ್ವಕ್ಕೆ ಪ್ರೇರೆಪಿಸಿದರು. ಈ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ. ಅ.2ರಂದು ಮಾತ್ರ ಅವರನ್ನು ನೆನಪಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಕೊಡುಗೆ ಮತ್ತು ಸಾಧನೆಯನ್ನು ಪ್ರತಿದಿನವೂ ಕುರಿತು ಸ್ಮರಿಸಬಹುದಾಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತನ್ನು ಯಾರು ಸಹ ಅಳಿಸಲು ಸಾಧ್ಯವಿಲ್ಲ. ಅವರು ನೀಡಿರುವ ಅಹಿಂಸೆ, ಸತ್ಯ, ಸತ್ಯಾಗ್ರಹ, ಸ್ವಚ್ಚತೆ, ಗ್ರಾಮ ಸ್ವರಾಜ್‌ನಂತಹ ತತ್ವಗಳು ಶ್ವಾಶತ. ಯುದ್ಧದ ಹೊರತಾಗಿಯೂ ಸಹ ಸ್ವಾತಂತ್ರೃಗಳಿಸಬಹುದು ಎಂಬುದನ್ನು ಇಡೀ ವಿಶ್ವಕ್ಕೆ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಗರ ಹಾಗೂ ಪಟ್ಟಣದಲ್ಲಿ ಯಾವುದಾದರೊಂದು ರಸ್ತೆಗಾದರೂ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಲಾಗಿರುತ್ತದೆ. ಇದರೊಂದಿಗೆ ನಗರದಲ್ಲಿ ಒಂದಾದರೂ ಪ್ರತಿಮೆ ನೋಡಲು ಸಿಗುತ್ತದೆ. ಇದರ ಅರ್ಥ ಸಮಾಜಕ್ಕೆ ಅವರು ನೀಡುವ ಕೊಡುಗೆ ಕಾರಣ ಎಂದು ಹೇಳಿದರು.
ಯಾವುದೇ ದೇಶದಲ್ಲಿ ದೇಶಪ್ರೇಮಿ ಅಥವಾ ದೇಶಕ್ಕೆ ಸೇವೆ ಸಲ್ಲಿಸಿದ ವ್ಯಕ್ತಿಗಳು ಮೃತರಾದರೆ ದೇಶದ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸುವ ಮೂಲಕ ಸಂತಾಪ ಸೂಚಿಸುತ್ತಾರೆ. ಆದರೆ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ವಿಶ್ವಸಂಸ್ಥೆ ವಿವಿಧ ರಾಷ್ಟ್ರಗಳ ಜತೆಗೆ ಸಭೆ ನಡೆಸಿ ವಿಶ್ವ ಸಂಸ್ಥೆಯಲ್ಲಿ ನೊಂದಾಯಿಸಲ್ಪಟ್ಟ ಎಲ್ಲಾ ದೇಶಗಳಲ್ಲೂ ತಮ್ಮ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸುವ ಮೂಲಕ ಸಂತಾಪ ಸೂಚಿಸಿಸಲಾಯಿತು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ,ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದ ಮಹಾನ್ ಚೇತನ ಮಹಾತ್ಮ ಗಾಂಧೀಜಿ. ಸ್ವಾತಂತ್ರೃ ಹೋರಾಟದಲ್ಲಿ ಅನೇಕರು ಭಾಗವಹಿಸಿದ್ದಾರೆ. ಆದರೂ ಗಾಂಧೀಜಿ ಅವರನ್ನು ಏಕೆ ನಾವು ಸ್ಮರಿಸುತ್ತೇವೆ ಎಂದರೆ ವಿಭಜನೆಯಾಗಿದ್ದ ಸ್ವಾತಂತ್ರೃ ಹೋರಾಟಗಾರರನ್ನು ಒಗ್ಗೂಡಿಸಿ ಬ್ರಿಟಿಷರೊಂದಿಗೆ ನಿರಂತರ ಅಹಿಂಸೆ ಮೂಲಕ ಹೋರಾಟ ನಡೆಸಿ ಜೈಲಿಗೆ ಹೋದರು. ನಿರಂತರ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರೃ ತರುವಲ್ಲಿ ಯಶಸ್ಸು ಕಂಡವರು ಗಾಂಧೀಜಿ ಎಂದರು.
ದೇಶದಲ್ಲಿ ಅನೇಕ ಪ್ರಧಾನ ಮಂತ್ರಿಗಳನ್ನು ನೋಡಿದ್ದೇವೆ. ಎಲ್ಲರಿಗಿಂತ ವಿಭಿನ್ನವಾಗಿ ನಿಲ್ಲುವವರು ಲಾಲ್ ಬಹದ್ದೂರ್ ಶಾಸ್ತ್ರಿ. ಸ್ವಾತಂತ್ರೃ ಹೋರಾಟದಲ್ಲೂ ಸಹ ಗುರುತಿಸಿಕೊಂಡಿದ್ದರು. ಜವಾಹರ್ ಲಾಲ್ ನೆಹರು ಕಾಲವಾದ ನಂತರ ದೇಶವನ್ನು ಮುನ್ನಡೆಸುವ ಮುಂದಾಳತ್ವ ವಹಿಸಿ ಪಾಕಿಸ್ತಾನದ ದಾಳಿಯನ್ನು ಎದುರಿಸಿ, ಹಲವಾರು ತುರ್ತು ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುದರು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಇಂದಿನ ಆಧುನಿಕತೆಯಲ್ಲಿ ಯುವ ಪೀಳಿಗೆ ಮೊಬೈಲ್, ಟಿ.ವಿ, ಕಂಪ್ಯೂಟರ್‌ನಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಮಹಾತ್ಮ ಗಾಂಧೀಜಿ ಅವರು ಪುಸ್ತಕವನ್ನು ಓದುವ ಮೂಲಕ ಜ್ಞಾನ ಸಂಪಾದಿಸಿದರು. ಯುವ ಜನತೆ ಮೊಬೈಲ್ ತ್ಯಜಿಸಿ ಪುಸ್ತಕದ ಮೊರೆ ಹೋಗಿ ಎಂದು ಕರೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್, ಮೇರಾ ಯುವ ಭಾರತ್ ಅಧಿಕಾರಿ ಶ್ರುತಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಸ್ತುವಾರಿ ಸಮಿತಿ ಸದಸ್ಯ ಟಿ.ಸಿ.ಗುರಪ್ಪ ಇತರರಿದ್ದರು.
ಇದೇ ವೇಳೆ ವಿವಿಧ ಧರ್ಮಗಳ ಗುರುಗಳಾದ ಧರಣೇಂದ್ರಯ್ಯ, ಪದ್ಮನಾಭ್, ಫಾದರ್ ಜೋಯಿಸನ್, ತನ್ವೀರ್ ಸರ್ವಧರ್ಮ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಉದ್ಯಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.