ಜಿಲ್ಲೆ

ಒಂದೇ ದಿನ ಗಾಂಧಿ ಜಯಂತಿ, ಪಿತೃಪಕ್ಷ ಹಬ್ಬದ ಜಿಜ್ಞಾಸೆ

ಬೆಂಗಳೂರು: ಈ ವರ್ಷ ಮಹಾಲಯ ಅಮಾವಾಸ್ಯೆಯ ಪಿತೃಪಕ್ಷದ ಹಬ್ಬವು ಗಾಂಧಿ ಜಯಂತಿ ದಿನದಂದೇ (ಅ.2) ಇರುವುದರಿಂದ, ಅಂದು ಪಿತೃಪಕ್ಷ ಆಚರಿಸುವವರಿಗೆ ಅನುಕೂಲವಾಗಲು ಮಾಂಸ ಮಾರಾಟ ನಿಷೇಧವನ್ನು ಹಿಂಪಡೆಯುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಈ ಸಂಬಂಧ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್ ವಿ.ವಿ.ಸತ್ಯನಾರಾಯಣ್ ಹಾಗೂ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಕಾಕತಾಳಿಯವಾಗಿ ಒಂದೇ ದಿನ ಎರಡೂ ಆಚರಣೆಯು ಬಂದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಪಿತೃಪಕ್ಷ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಅಹವಾಲು ಸಲ್ಲಿಸಲಾಗಿದೆ.

ತಲತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿರುವ ಪಿತೃಪಕ್ಷವನ್ನು ನಾಗರಿಕರು ರಾಜ್ಯದೆಲ್ಲೆಡೆ ಆಚರಿಸುತ್ತಾ ಬಂದಿದ್ದಾರೆ. ಹಲವು ಮಂದಿ ಮಾಂಸಾಹಾರವನ್ನು ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಹಾಕಿ, ಪೂಜೆ ಸಲ್ಲಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಈ ಆಚರಣೆಗೆ ಅಡ್ಡಿಯಾಗದಂತೆ ಮಾಂಸ ಮಾರಾಟ ನಿಷೇಧ ಆದೇಶವನ್ನು ಸಡಿಲಿಸಬೇಕು ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಉಲ್ಲೇಖಿಸಲಾಗಿದೆ.