ಜಿಲ್ಲೆ

ವೀರಸೌಧದಲ್ಲಿ ಗಾಂಧಿ ಜಯಂತಿ ಆಚರಣೆ

ಬೆಳಗಾವಿ: ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಷ್ಟೇ ಸ್ವಚ್ಛತೆಗೂ ಕಾಳಜಿ ವಹಿಸಿದ್ದರು. ದೇಶದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ಆದ್ದರಿಂದ ನಮ್ಮ ನಗರವನ್ನು ಸ್ವಚ್ಛವಾಗಿರಿಸಲು ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದು ಮಹಾಪೌರ ಮಂಗೇಶ ಪವಾರ ಕೋರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಗುರುವಾರ ವೀರಸೌಧದಲ್ಲಿ ಏರ್ಪಡಿಸಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜೀವನವನ್ನು ಪ್ರೇರಣೆಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ದೇಶ ಕಂಡ ಮಹಾನ ನಾಯಕ ಲಾಲ್ ಬಹದ್ದಐರ ್ ಶಾಸ್ತ್ರೀಜಿ, ಬಹಳ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದರು. ಅವರಂತೆ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಉನ್ನತ ದಕ್ಷ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಭಾಷಣ


ಸಾಹಿತಿ ಪ್ರಕಾಶ ಗಿರಿಮಲ್ಲನ್ನವರ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದರಿಂದ ಬೆಳಗಾವಿಗೂ ರಾಷ್ಟ್ರಮಟ್ಟದ ಕೀರ್ತಿ ಪ್ರಾಪ್ತವಾಯಿತು. ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆ ಎರಡು ಲಕ್ಷ ಹಣ ಖರ್ಚು ಮಾಡಿ, ಅಧಿವೇಶನ ನಡೆಲಾಗಿತ್ತು. ಗಾಂಧೀಜಿಯವರೊಂದಿಗೆ ಅನೇಕ ರಾಷ್ಟ್ರೀಯ ಮುಖಂಡರು ಆಗಮಿಸಿದ್ದರು. ಈ ಅಧಿವೇಶನದಲ್ಲಿ ಮೊಟ್ಟ ಮೊದಲ ಬಾರಿಗೆ ಹುಯಿಲಗೋಳ ನಾರಾಯಣರಾಯರು ಬರೆದ ’ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಗೀತೆಯನ್ನು ಗಂಗೂಬಾಯಿ ಹಾನಗಲ್ ಅವರು ಹಾಡಿದ್ದು ಇಂದು ಇತಿಹಾಸ ಆಗಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ, ಶಾಸಕ ಆಸೀ ಸೇಠ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಪಂ ಸಿಇಒ ರಾಹುಲ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಉಪ ಮೇಯರ್ ವಾಣಿವಿಲಾಸ ಜೋಶಿ, ಪಾಲಿಕೆ ಆಯುಕ್ತೆ ಶುಭ. ಬಿ, ಉಪ ಆಯುಕ್ತ ಉದಯಕುಮಾರ ತಳವಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೊಳೇಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇತರರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಮೋರೆ ಹಾಗೂ ತಂಡದವರು ಗಾಂಧಿಪ್ರಿಯ ಭಜನೆ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಜರುಗಿತು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಆಸೀಫ್ ಸೇಠ ಮತ್ತು ಅಧಿಕಾರಿಗಳು
ಗಾಂಧಿ ಪ್ರತಿಮೆಗೆ ನಮನ