ಪುತ್ತೂರು: ಅಹಿಂಸೆ ಮೂಲಕ ಜೀವನ ನಡೆಸಿದ ಗಾಂಧೀಜಿಯವರು ದೇಶಕ್ಕಾಗಿ ಉತ್ತಮ ಸಂದೇಶ ನೀಡಿದ್ದಾರೆ. ಅವರು ಬಿಟ್ಟು ಹೋದ ತತ್ವ ಸಿದ್ಧಾಂತಗಳಿಗೆ ಗೌರವ ನೀಡುವ ಕೆಲಸವಾಗಬೇಕು. ದೇಶೀಯ ಉತ್ಪನ್ನ ಬಳಕೆಗೆ ಒತ್ತು ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಗಾಂಧೀ ಕಟ್ಟೆಯಲ್ಲಿ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುತ್ತೂರು ಗಾಂಧೀ ಕಟ್ಟೆ ಸಮಿತಿ ಆಶ್ರಯದಲ್ಲಿ ಗಾಂಧೀ ಜಯಂತಿ ದಿನಾಚರಣೆ ಅಂಗವಾಗಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿದರು. ಹಿರಿಯ ಗಾಂಧೀವಾದಿ ಚಂದ್ರಹಾಸ ರೈ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನಿಯಸ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ತಹಸೀಲ್ದಾರ್ ನಾಗರಾಜ್ ವಿ., ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಉಪಸ್ಥಿತರಿದ್ದರು.
ಗಾಂಧೀ ಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ವಂದಿಸಿದರು. ಸಮಿತಿ ಸದಸ್ಯ ಇಸಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.
ಗಾಂಧೀಕಟ್ಟೆ ನಿರ್ವಹಣೆಯಿಲ್ಲ!
ಗಾಂಧೀ ಜಯಂತಿ ಕಾರ್ಯಕ್ರಮ ಸಂದರ್ಭದಲ್ಲಿಯೂ ಗಾಂಧೀ ಕಟ್ಟೆಯ ಛಾವಣಿಯಲ್ಲಿ ತುಂಬಿಕೊಂಡ ಕಸ, ಮಣ್ಣು ಸ್ವಚ್ಛಗೊಳಿಸುವ ಕಾರ್ಯಕ್ಕೆ ನಗರ ಸಭೆ ಮುಂದಾಗಿಲ್ಲ. ಗಾಂಧೀ ಪ್ರತಿಮೆ ತಳಭಾಗದಲ್ಲಿ ಅಳವಡಿಸಿದ ಮಾರ್ಬಲ್ ಕಿತ್ತು ಹೋಗಿ ಸಿಮೆಂಟ್ ಕಾಣುತ್ತಿದ್ದು, ಅದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗದಿರುವುದು ಗಾಂಧೀ ಅಭಿಮಾನಿಗಳಿಗೆ ನೋವು ಉಂಟುಮಾಡಿದೆ.
ಮಕ್ಕಳಿಗೆ ಏನೂ ಇಲ್ಲ!
ತಾಲೂಕು ಆಡಳಿತ ಹೊರಡಿಸಿದ ಆಮಂತ್ರಣದಲ್ಲಿ ಬೆಳಗ್ಗೆ ೧೦ ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಗಬೇಕಾಗಿತ್ತು. ವಿವಿಧ ಶಾಲೆಯ ವಿದ್ಯಾರ್ಥಿಗಳು ೯.೩೦ಕ್ಕೆ ಆಗಮಿಸಿ ಹಾಡಲು ಪ್ರಾರಂಭಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಬೇಗನೆ ಮನೆ ಬಿಟ್ಟ ಕಾರಣ ಬೆಳಗ್ಗಿನ ಉಪಹಾರವನ್ನು ಸೇವಿಸಿರಲಿಲ್ಲ. ಸರ್ಕಾರಿ ಅಧಿಕಾರಿಗಳು ೧೦.೨೦ಕ್ಕೆ ಸ್ಥಳಕ್ಕಾಗಮಿಸಿ ಶಾಸಕರನ್ನು ಕಾದುಕುಳಿತಿದ್ದು, ೧೧.೨೦ರ ಸುಮಾರಿಗೆ ಕಾರ್ಯಕ್ರಮ ಪ್ರಾರಂಭವಾಗಿದೆ. ಇಷ್ಟು ಹೊತ್ತು ಶಾಲೆಯ ಮಕ್ಕಳು ಆಹಾರ, ನೀರು ಇಲ್ಲದೆ ಕುಳಿತುಕೊಂಡಿದ್ದರು.