ಕಡೂರು: ಗಾಂಧೀಜಿ ಸರಳ ಜೀವನ ವಿಶ್ವಕ್ಕೇ ಮಾದರಿ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಪುರಸಭೆ ಕಚೇರಿಯಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಮಹಾನ್ ನಾಯಕರ ಸಾಲಿನಲ್ಲಿ ಗಾಂಧಿ ಮೇರುಪಂಕ್ತಿಯಲ್ಲಿದ್ದಾರೆ. ಅಹಿಂಸೆ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಅವರ ಕೊಡುಗೆ ಅಪಾರವಾದುದು ಎಂದರು.
ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನೇ ಹುತಾತ್ಮ ಎನ್ನುವ ಮನಸ್ಥಿತಿ ಇನ್ನೂ ಇರುವುದು ವಿಪರ್ಯಾಸ. ಗಾಂಧಿ ತತ್ವ, ಸಿದ್ಧಾಂತಗಳನ್ನು ದೂರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲಾಲ್ ಬಹಾದೂರ್ ಶಾಸಿ ಅವರ ಕಾರ್ಯವೈಖರಿ ನಮೆಗೆಲ್ಲರಿಗೂ ಆದರ್ಶವಾಗಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಅಹಿಂಸೆ ಮತ್ತು ಶಾಂತಿಯಿಂದ ಸ್ವಾತಂತ್ರ್ಯ ಗಳಿಸಬಹುದು ಎಂಬುದನ್ನು ಮಹಾತ್ಮ ಗಾಂಧಿ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಗಾಂಧಿ ಆದರ್ಶದ ಬದುಕನ್ನು ಇತರ ರಾಷ್ಟ್ರಗಳಲ್ಲಿ ಅಳವಡಿಸಿಕೊಂಡಿರುವುದು ದೇಶಕ್ಕೆ ಹೆಮ್ಮೆ ಎಂದು ಹೇಳಿದರು.
ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಸುಧಾ ಉಮೇಶ್, ಜ್ಯೋತಿ ಆನಂದ್, ಯಾಸೀನ್, ಗೋವಿಂದರಾಜು, ಇಕ್ಬಾಲ್, ಹಾಲಮ್ಮ, ಮನು ಮರುಗುದ್ದಿ, ಪುಷ್ಪಲತಾ ಮಂಜುನಾಥ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಶ್ರೇಯಸ್‌ಕುಮಾರ್, ಶ್ರೀನಿವಾಸ್‌ಮೂರ್ತಿ, ತಿಮ್ಮಯ್ಯ, ಆಸಂಧಿ ಕಲ್ಲೇಶ್, ಡಿ.ಕೃಷ್ಣಪ್ಪ ಹಾಗೂ ಸಿಬ್ಬಂದಿ ಇದ್ದರು.