ಮೈಸೂರು: ಸ್ವಾತಂತ್ರ್ಯದ ನಂತರ ಗಾಂಧೀಜಿ ಹೆಚ್ಚು ಕಾಲ ಬದುಕಿದ್ದರೆ ದೇಶ ನಿರ್ಮಾಣದ ಪರಿಕಲ್ಪನೆ ಬೇರೆ ಆಗುತ್ತಿತ್ತು ಎಂದು ಗಾಂಧಿವಾದಿ ಡಾ.ಬಿ.ಸುಜಯ್ ಕುಮಾರ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ, ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ನಗರದ ಮಾನಸ ಗಂಗೋತ್ರಿಯ ಗಾಂಧಿ ಭವನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿಶ್ವ ಅಹಿಂಸಾ ದಿನಾಚರಣೆ’ ಮತ್ತು ‘ಗಾಂಧೀಜಿ ಅವರ ಜಾತ್ಯತೀತ ವ್ಯಕ್ತಿತ್ವ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಭಾರತವನ್ನು ಜಾತ್ಯತೀತ ಎಂದು ಕರೆಯಲಾಗಿದೆ. ಆದರೀಗ ಧರ್ಮದಲ್ಲಿ ಸಮರ್ಪಿತವಾದ ಈ ದೇಶವನ್ನು ಧಾರ್ಮಿಕವಲ್ಲದ, ಮತ ದೂರ ಜಾತ್ಯತೀತ ರಾಷ್ಟ್ರ ಎಂದು ಕರೆದರೆ ಏನು ಅರ್ಥ ಬರಲಿದೆ. ಹಿಮಾಲಯವನ್ನಾದರೂ ಬೇರೆ ದಿಕ್ಕಿನಲ್ಲಿ ಸಾಗಿಸಬಹುದು ಏನೋ? ಆದರೆ, ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಲಕ್ಷಣವನ್ನು ಮಾರ್ಪಡಿಸಲು ಸಾಧ್ಯವಿಲ್ಲ ಎಂದರು.
ಜಾತ್ಯತೀತಕ್ಕೆ ಪ್ರತಿಯೊಂದು ದೇಶದಲ್ಲಿ ತನ್ನದೇ ಆದ ಅರ್ಥವಿದೆ. ಧರ್ಮದಿಂದ ದೂರವಾದದ್ದು ಎಂಬುದು ಪಾಶ್ಚಿಮಾತ್ಯರ ಪರಿಕಲ್ಪನೆ. ನಮ್ಮಲ್ಲಿ ಜಾತ್ಯತೀತ ಎಂದರೆ ಸಮನ್ವಯತೆ ಸಾಧಿಸುವುದಾಗಿದೆ. ಜಾತ್ಯತೀತ ಎಂದರೆ ಸಮನ್ವಯತೆ ಸಾಧಿಸುವುದು ಎಂದು ಸ್ವಾತಂತ್ರ್ಯ ಪೂರ್ವದಲ್ಲೇ ರಾಮಕೃಷ್ಣ ಪರಮಹಂಸರು, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು ಎಂದು ಹೇಳಿದರು.
‘ಎಲ್ಲ ಮತದಾರರಿಗೂ ಸರ್ವಸಮಾನವಾದ ಹಕ್ಕು, ಹೊಣೆಗಾರಿಕೆ ನೀಡುವುದೇ ಜಾತ್ಯತೀತದ ಪರಿಕಲ್ಪನೆ. ಇದು ಆಸ್ತಿಕ-ನಾಸ್ತಿಕ ಸಿದ್ಧಾಂತ ಸ್ಥಾಪಿಸುವುದಲ್ಲ’ ಎಂದು ರಾಮಕೃಷ್ಣ ವಚನ ವೇದಕ್ಕೆ ಬರೆದಿರುವ ಮುನ್ನಡಿಯಲ್ಲಿ ಕುವೆಂಪು ಅವರು ಹೇಳಿದ್ದಾರೆ. ಇದು ಕೇವಲ ಕುವೆಂಪು ಅವರ ಮಾತಲ್ಲ. ರಾಜ್ಯಾಂಗ ಇದನ್ನೇ ಹೇಳಿದ್ದು, ಅದು ಜಾತ್ಯತೀತವೂ ಸಾರ್ವಜನಿಕವಾಗಿ ನಾವು ನಡೆದುಕೊಳ್ಳಬೇಕಾದನ್ನು ಕಲಿಸಿದೆ. ರಾಷ್ಟ್ರದ ಆಡಳಿತವನ್ನು ಲಕ್ಷಣಗಳನ್ನು ಸಮನ್ವಯ ರಾಷ್ಟ್ರ ಎಂದು ಕರೆಯಬೇಕು ಎಂದರು.
ಜಗತ್ತಿನ ಇತಿಹಾಸದಲ್ಲೇ ಗಾಂಧೀಜಿ ಅವರಷ್ಟು ಜನರನ್ನು ಪರಿವರ್ತನೆ ಮಾಡಿದ ಮತ್ತೊಬ್ಬ ನಾಯಕ ದೊರೆಯುವುದಿಲ್ಲ ಎಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ ಮಾತನಾಡಿದರು. ಗಾಂಧಿವಾದಿ ವೇದಾಂಬ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಮೈವಿವಿ ಗಾಂಧಿ ಭವನದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಎಸ್.ಕೃಷ್ಣಪ್ಪ, ಡಾ.ಪಿ.ಎಸ್.ಮಧುಸೂದನ ಪಾಲ್ಗೊಂಡಿದ್ದರು