ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ನರೇಗಾ, ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿರುವ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಉತ್ತಮ ಆಡಳಿತದ ಮೂಲಕ ಸರ್ಕಾರದ ಸೌಲಭ್ಯಗಳನ್ನು ಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವ ಗ್ರಾಪಂಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತೀ ವರ್ಷವೂ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸುತ್ತದೆ. ಈ ಪ್ರಯತ್ನದಲ್ಲಿ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಸಫಲತೆ ಕಂಡಿದ್ದು, ಸರ್ಕಾರದ ನಿಯಮಾವಳಿ ಪ್ರಕಾರ ಉತ್ತಮ ಕಾರ್ಯಗಳನ್ನು ಸಾಧಿಸಿ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.
ಪ್ರತೀ ವರ್ಷ ಗಾಂಧಿ ಜಯಂತಿಯಂದೇ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತಿತ್ತು. ಆದರೆ ಕಾರ್ಯಕ್ರಮ ಬೇರೊಂದು ದಿನಾಂಕಕ್ಕೆ ಮುಂದೂಡಿರುವ ಕಾರಣ, ಅಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಗ್ರಾಪಂ ಅಧ್ಯಕ್ಷರು, ಪಿಡಿಒ ಸ್ವೀಕರಿಸಲಿದ್ದಾರೆ.
ಯೋಜನೆಗಳ ಯಶಸ್ವಿ ಅನುಷ್ಠಾನ
ಬನ್ನಿಕುಪ್ಪೆ ಗ್ರಾಪಂ ಬಹು ಮುಖ್ಯವಾಗಿ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಸಮುದಾಯ ಕಾಮಗಾರಿಗಳಲ್ಲಿ ಕೆರೆ, ನಾಲಾ ಅಭಿವೃದ್ಧಿ, ಚೆಕ್ ಡ್ಯಾಂ ಸೇರಿ ಅಂತರ್ಜಲ ಹೆಚ್ಚಳಕ್ಕೆ ಪೂರಕ ಕಾರ್ಯಕ್ರಮ, ಶಾಲಾ ಆಟದ ಮೈದಾನ, ಅಂಗನವಾಡಿಗಳು ಇತರ ಸಮುದಾಯ ಕೆಲಸಗಳಿಗೆ ಒತ್ತು ನೀಡಿದೆ. ಕಂದಾಯ ವಸೂಲಾತಿ ಮಾಡಿ ಗ್ರಾಪಂ ಸಿಬ್ಬಂದಿಗೆ ಕಾಲಕಾಲಕ್ಕೆ ವೇತನ, ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಬಳಕೆ ಮಾಡಿಕೊಳ್ಳಲಾಗಿದೆ.
ಸ್ವಚ್ಛತೆಗೆ ಆದ್ಯತೆ
ಗ್ರಾಪಂನಲ್ಲಿ ಕಸ ಸಂಗ್ರಹಣೆಗೆ ಆಟೋ ಇದ್ದು, ಪ್ರತಿನಿತ್ಯ ಮನೆ ಮನೆಗಳಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಪಡೆಯುವ ಗ್ರಾಪಂ, ಪರಿಸರದ ಸ್ವಚ್ಛತೆಗೆ ಒತ್ತು ಕೊಟ್ಟಿದೆ. ಕಾಲಕಾಲಕ್ಕೆ ಚರಂಡಿ ಹೂಳೆತ್ತುವುದು, ಗಿಡ-ಗಂಟಿ ನಿರ್ವಹಣೆ ಮಾಡುವುದು, ಕುಡಿಯುವ ನೀರು ಸರಬರಾಜು, ಬೀದಿದೀಪ ನಿರ್ವಹಣೆ, ಸ್ಮಶಾನಗಳ ಅಭಿವೃದ್ಧಿ, ಸಮುದಾಯ ಕ್ಷೇತ್ರಗಳ ಸ್ವಚ್ಛತೆ, ಸಾರ್ವಜನಿಕರಲ್ಲಿ ಆರೋಗ್ಯ ಕಾಳಜಿಗೆ ಗೋಡೆ ಬರಹ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ನಾಗರಿಕರಿಗೆ ಸಕಾಲಕ್ಕೆ ಸೇವೆ
ಗ್ರಾಪಂಗಳಲ್ಲಿ ಇ-ಸ್ವತ್ತು ಖಾತಾ, ಕಾಲಕಾಲಕ್ಕೆ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ವಿಶೇಷ ಗ್ರಾಮಸಭೆಗಳ ಮೂಲಕ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ತಿಳಿಸುವುದು, ಕಾಲಮಿತಿಯೊಳಗೆ ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಿ ಮಾಹಿತಿ ಒದಗಿಸುವುದು, ಸಾರ್ವಜನಿಕರ ದೂರಿಗೆ ಸ್ಪಂದನೆ, ಸರ್ಕಾರಿ ಸೇವೆಗಳ ಮಾಹಿತಿ, ಆಸ್ತಿಗಳ ಡಿಜಿಟಲೀಕರಣ, ಆಡಳಿತಾತ್ಮಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ, ಆನ್‌ಲೈನ್ ಹಾಜರಾತಿ, ಸಾರ್ವಜನಿಕ ಗ್ರಾಪಂ ಗ್ರಂಥಾಲಯ ಉತ್ತಮ ನಿರ್ವಹಣೆ, ಉತ್ತಮ ಕಡತ ವಿಲೇವಾರಿ ಸೇರಿ ಹಲವು ಕಾರ್ಯಕ್ರಮಗಳ ಯಶಸ್ವಿಗೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿದೆ.
ಸೋಲಾರ್ ಅಳವಡಿಕೆ
ಗ್ರಾಪಂನ ಸಂಪೂರ್ಣ ಆಡಳಿತ ವ್ಯವಹಾರಗಳಿಗೆ ಕಚೇರಿ ಒಳ ಮತ್ತು ಹೊರ ಆವರಣಕ್ಕೆ ಸೋಲಾರ್ ಲಕ ಅಳವಡಿಸಲಾಗಿದ್ದು, ಇವುಗಳಿಂದಲೇ ವಿದ್ಯುತ್ ಪೂರೈಸಿಕೊಳ್ಳಲಾಗುತ್ತಿದೆ. ಅಲ್ಲದೆ ಗ್ರಾಪಂ ಆವರಣದ ಖಾಲಿ ಜಾಗದಲ್ಲಿ ಸುಂದರ ಉದ್ಯಾನವನ ಅಭಿವೃದ್ಧಿ ಪಡಿಸಿ, ಆಧುನಿಕ ಸ್ಪರ್ಶ ನೀಡಲಾಗಿದೆ.
ಬೆಂಗಳೂರಿನ ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ಲಕ್ಕಪ್ಪನಹಳ್ಳಿಯವರು. ನಾಡಿಗೆ ಕೊಡುಗೆ ನೀಡಿದ ಇಂತಹ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ಹೆಮ್ಮೆಯ ಕ್ಷಣ ಎನಿಸಿದೆ. - ಚಂದ್ರಗಿರಿ, ಗ್ರಾಪಂ ಸದಸ್ಯ
ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಶ್ರಮದಿಂದ ಸರ್ಕಾರದ ಯೋಜನೆಗಳು ಸಮರ್ಪಕ ಅನುಷ್ಠಾನದ ಜತೆಗೆ ಗ್ರಾಪಂ ಎಲ್ಲ ಸದಸ್ಯರ ಅಭಿವೃದ್ಧಿ ಪರ ಚಿಂತನೆಯಿಂದ ಗಾಂಧಿ ಗ್ರಾಮ ಪುರಸ್ಕಾರ ನಮ್ಮ ಗ್ರಾಪಂ ಸಿಕ್ಕಿದೆ.ಬಿ.ಸಿ.ಹೇಮಂತ್‌ಕುಮಾರ್, - ಗ್ರಾಪಂ ಅಧ್ಯಕ್ಷ, ಬನ್ನಿಕುಪ್ಪೆ.
ಗಾಂಧಿ ಗ್ರಾಮ ಪುರಸ್ಕಾರ ಜವಾಬ್ದಾರಿ ಹೆಚ್ಚಿಸಿದೆ. ಬೀದಿದೀಪ ನಿರ್ವಹಣೆ, ಸ್ವಚ್ಛತೆ, ಕುಡಿಯುವ ನೀರು ಸರಬರಾಜು, ಶೌಚಗೃಹ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ಇನ್ನೂ ಆದ್ಯತೆ ನೀಡಲಾಗುವುದು.- ಶಿವಕುಮಾರ್, ಪಿಡಿಒ, ಬನ್ನಿಕುಪ್ಪೆ ಗ್ರಾಪಂ.