ಜಿಲ್ಲೆ

ಬೀಡನಾಳ ಗ್ರಾಪಂ ಸಾಧನೆಗೆ ಗಾಂಧಿ ಗ್ರಾಮ ಪ್ರಶಸ್ತಿ ಗರಿ

ಮುಂಡರಗಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ ನೀಡಲಾಗುವ 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಬೀಡನಾಳ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.
ಬೆಂಗಳೂರಿನ ವಿಧಾನಸಭೆಯ ಬಾಂಕ್ವೆಟ್ ಹಾಲ್‌ನಲ್ಲಿ ಅ.2ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪಂಚಾಯಿತಿಗೆ ಪುರಸ್ಕಾರ ಒಲಿದಿರುವುದರಿಂದ ಗ್ರಾ.ಪಂ. ಅಧ್ಯಕ್ಷ ಕೊಪ್ಪಣ್ಣ ಕೊಪ್ಪಣ್ಣವರ, ಸದಸ್ಯರು ಹಾಗೂ ಅಧಿಕಾರಿ, ಸಿಬ್ಬಂದಿಯಲ್ಲಿ ಸಂಭ್ರಮ ಮನೆ ಮಾಡಿದೆ.
ನರೇಗಾ ಯೋಜನೆಯ ಅನುಷ್ಠಾನ, ಗ್ರಾಮೀಣ ಜನತೆಗೆ ಅಗತ್ಯ ಮೂಲ ಸೌಕರ್ಯ, ವಸತಿ ಯೋಜನೆ ಅನುಷ್ಠಾನ, ವೈಯಕ್ತಿಕ ಶೌಚಗೃಹ ನಿರ್ಮಾಣ, ನೈರ್ಮಲ್ಯೀಕರಣ, 14ನೇ ಹಣಕಾಸು ಅನುದಾನ ವಿನಿಯೋಗ, ಗ್ರಾ.ಪಂ. ಮಾಸಿಕ ಸಭೆ ಹಾಗೂ ಸಭೆಗಳ ಮಾಹಿತಿಯನ್ನು ತಂತಾಂಶ್ರದಲ್ಲಿದಲ್ಲಿ ಅಳವಡಿಕೆ, ತೆರಿಗೆ ಸಂಗ್ರಹ, ಸಕಾಲ ಸೇವೆ ಅನುಷ್ಠಾನ ಸೇರಿ ಒಟ್ಟು 34 ಅಂಶಗಳ ಸಾಧನೆ ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಗ್ರಾ.ಪಂ. ಸದಸ್ಯರ, ಗ್ರಾಮಸ್ಥರ, ಅಧಿಕಾರಿಗಳ ಹಾಗೂ ಸಿಬ್ಬಂದಿ ಸಹಕಾರದಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ನಿರ್ವಹಣೆ ಮತ್ತಿತರ ಅಭಿವೃದ್ಧಿ ಕಾರ್ಯ ಮಾಡಲಾಗಿದ್ದು, ಇದನ್ನು ಪರಿಗಣಿಸಿ ನಮ್ಮ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಒಲಿದಿರುವುದು ಸಂತಸ ತಂದಿದೆ. ಮತ್ತಷ್ಟು ಜನಪರ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶ್ರಮಿಸುತ್ತೇವೆ.ಕೊಪ್ಪಣ್ಣ ಕೊಪ್ಪಣ್ಣವರ, ಬೀಡನಾಳ ಗ್ರಾ.ಪಂ.ಅಧ್ಯಕ್ಷ