ಉಡುಪಿ: ಜನಸಾಮಾನ್ಯರ ಭಾವನೆಗಳನ್ನು ಅರ್ಥಮಾಡಿಕೊಂಡು ರಚಿಸಿದ ಸಂವಿಧಾನವನ್ನು ಏಕಾಏಕಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಮಹಾತ್ಮಾ ಗಾಂಧಿಯವರ ಚಿಂತನೆ ಅಡಕವಾಗಿದ್ದು, ಮಾನವೀಯ ಮೌಲ್ಯ ಅಳವಡಿಸಿಕೊಂಡಿರುವ ಕಾರಣ ಭಾರತಕ್ಕೆ ಜಗತ್ತಿನಲ್ಲಿ ಜಾತ್ಯಾತಿತ ರಾಷ್ಟ್ರ ಎಂಬ ಹೆಗ್ಗಳಿಕೆ ಇದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಗುರುವಾರ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಓದದೇ ಇರುವವರಿಂದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಸಂವಿಧಾನವನ್ನು ಓದಿದರೆ ಮಾತ್ರ ಅದರ ವಿಶಿಷ್ಟತೆ ಅರ್ಥವಾಗುತ್ತದೆ. ಯಾವುದೇ ಚರ್ಚೆಗಳಿಲ್ಲದೆ ಕೆಲವೇ ಜನರ ತಂಡ 15 ದಿನದಲ್ಲಿ ರಚನೆ ಮಾಡಿದ ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಸಂವಿಧಾನದಲ್ಲಿದೆ. ಮಹಾತ್ಮ ಗಾಂಧಿ ಇಡೀ ಪ್ರಪಂಚಕ್ಕೆ ನೀಡಿದ ಸತ್ಯ, ಶಾಂತಿ, ಅಹಿಂಸೆಯ ಸಂದೇಶವನ್ನು ಸಮಾಜಕ್ಕೆ ತಿಳಿಸಬೇಕು ಎಂದರು.
ಹಿರಿಯಡ್ಕ ಹಿರಿಯ ಕಾಂಗ್ರೆಸ್ ಮುಖಂಡ ಜಯವಂತ ರಾವ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಉಪಾಧ್ಯಕ್ಷ ಎಂ.ಎ ಗಪೂರ್, ಕೆಪಿಸಿಸಿ ವಕ್ತಾರ ನಿಖಿತ್ ರಾಜ್ ಮೌರ್ಯ, ವಕ್ತಾರೆ ವೇರೆನಿಕಾ ಕರ್ನೆಲಿಯೋ, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಾಜು ಪೂಜಾರಿ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.