ರೋಣ: ತಾಲ್ಲೂಕಿನ ಕೊತಬಾಳ ಗ್ರಾಮ ಪಂಚಾಯಿತಿಯು 2022- 23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಎರಡನೇ ಬಾರಿಗೆ ಈ ಗೌರವ ಲಭಿಸಿದೆ.
15ನೇ ಹಣಕಾಸು ಯೋಜನೆ ಅಡಿ ಬಿಡುಗಡೆಯಾದ ಅನುದಾನ, ಜಮಾಬಂದಿ, ಉದ್ಯೋಗ ಖಾತ್ರಿ ಯೋಜನೆ, ಮೂಲಸೌಲಭ್ಯಗಳಾದ ಕುಡಿಯುವ ನೀರು ಪೂರೈಕೆ, ಬೀದಿದೀಪ ಅಳವಡಿಕೆ, ಸಮರ್ಪಕ ವಸತಿ ಯೋಜನೆ ಅನುಷ್ಠಾನ, ನೈರ್ಮಲ್ಯ, ತ್ಯಾಜ್ಯನಿರ್ವಹಣೆ, ಸಕಾಲದಲ್ಲಿ ವಾರ್ಡ್ ಹಾಗೂ ಗ್ರಾಮಸಭೆ ನಡೆಸಿರುವುದು ಸೇರಿದಂತೆ ಹತ್ತು ಹಲವು ಕೆಲಸಗಳು ಪ್ರಶಸ್ತಿ ಮುಡಿಗೇರಲು ಕಾರಣವಾಗಿವೆ.
ನಮ್ಮ ಪಂಚಾಯ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಪಿಡಿಒ ಕಲ್ಪನಾ ಕಡಗದ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯ, ಗ್ರಾಮಸಭೆಗಳು, ಜನರ ಕುಂದು-ಕೊರತೆ ನೀಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಸಿಬ್ಬಂದಿಯ ಸಹಕಾರದಿಂದ ಪುರಸ್ಕಾರ ಲಭಿಸಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭೀಮವ್ವ ಗುಳಗುಳ್ಳಿ, ಸದಸ್ಯರಾದ ವೀರಣ್ಣ ಯಾಳಗಿ ತಿಳಿಸಿದ್ದಾರೆ.