ಜಿಲ್ಲೆ

ಗಾಂಧಿ-ಶಾಸ್ತ್ರೀಜಿ ದೇಶಕ್ಕಾಗಿ ಜೀವನ ಮುಡಿಪಿಟ್ಟ ಮಹನೀಯರು

ಹಾವೇರಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಇಬ್ಬರೂ ಮಹನೀಯರು ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟು ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿ ಉಪವಾಸ ಸತ್ಯಾಗ್ರಹಗಳ ಮೂಲಕ ಜನರಲ್ಲಿ ಸ್ವಾತಂತ್ರ್ಯ ಕಿಚ್ಚು ಹೆಚ್ಚಿಸಿದರು ಎಂದು ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಇಲ್ಲಿನ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಹಾಗೂ ಸೇವಾ ಪಾಕ್ಷಿಕ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಾಂಧೀಜಿ ನೀಡಿದ ಸಂದೇಶವನ್ನು ಕೇವಲ ಭಾರತ ಅಷ್ಟೇ ಅಲ್ಲ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿದೆ. ಲಾಲ್ ಬಹಾದೂರ್ ಶಾಸ್ತ್ರಿ ಅವರು ದೇಶದ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ಕೆಲಸಗಳನ್ನು ಮಾಡಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಘೊಷವಾಕ್ಯದ ಮೂಲಕ ರೈತರು ಹಾಗೂ ಸೈನಿಕರನ್ನು ಪ್ರೋತ್ಸಾಹಿಸಿದರು ಎಂದರು.

ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಭಾರತದ ಇತಿಹಾಸದಲ್ಲಿ ಲಕ್ಷಾಂತರ ಜನರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದರು. ಗಾಂಧೀಜಿ ಸಾರಿದ ಅಹಿಂಸಾ ಮಾರ್ಗವನ್ನು ಭಾರತ ಅಳವಡಿಸಿಕೊಂಡಿದೆ. ಭಾರತ ಶಾಂತಿ ಹಾಗೂ ಸಹನೆಯ ತತ್ವದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ನಾವೆಲ್ಲರೂ ಗಾಂಧೀಜಿ, ಶಾಸ್ತ್ರೀಜಿ ಅವರು ನೀಡಿದ ಸಂದೇಶವನ್ನು ಪಾಲಿಸೋಣ ಎಂದರು.

ರಾಜ್ಯ ಪ್ರಕೋಷ್ಠ ಸದಸ್ಯ ಮುರಿಗೆಪ್ಪ ಶೆಟ್ಟರ, ರಾಜ್ಯ ಒಬಿಸಿ ಮೋರ್ಚಾ ಸದಸ್ಯ ಮಂಜುನಾಥ ಮಡಿವಾಳರ, ಜಿಲ್ಲಾ ಉಪಾಧ್ಯಕ್ಷರಾದ ಸಿದ್ದು ಚಿಕ್ಕಬಿದರಿ, ಸುರೇಶ ಹೊಸಮನಿ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ಪಿ.ಚಾವಡಿ ಮಾತನಾಡಿದರು. ಕಲ್ಯಾಣಕುಮಾರ ಶೆಟ್ಟರ, ಚಂದ್ರಣ್ಣ ಹರಿಜನ, ಅಭಿಷೇಕ ಗುಡಗೂರ, ಗಿರೀಶ ತುಪ್ಪದ, ನಿಂಗಪ್ಪ ಬಟ್ಲಕಟ್ಟಿ, ಲಲಿತಾ ಗುಂಡೆನಹಳ್ಳಿ, ರೋಹಿಣಿ ಪಾಟೀಲ, ಚನ್ನಮ್ಮಾ ಪಾಟೀಲ, ಲತಾ ಬಡ್ನಿಮಠ, ರಾಮಕ್ಕ ವಡ್ಡರ, ಇತರರು ಉಪಸ್ಥಿತರಿದ್ದರು.

430 ಯುನಿಟ್ ರಕ್ತದಾನ: ಸೆ.17ರಿಂದ ಅ.2ರವರೆಗೆ ಆಯೋಜಿಸಿದ್ದ ಸೇವಾ ಪಾಕ್ಷಿಕ ಅಭಿಯಾನದ ಅವಧಿಯಲ್ಲಿ 8 ರಕ್ತದಾನ ಶಿಬಿರಗಳನ್ನು ನಡೆಸಿ ಸುಮಾರು 430 ಯುನಿಟ್ ರಕ್ತದಾನ ಪಡೆಯಲಾಗಿದೆ. ಅಲ್ಲದೆ, ದೇವಸ್ಥಾನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಗಿದೆ. ವಿಚಾರ ಸಂಕಿರಣ, ಪ್ರಬುದ್ಧರ ಘೊಷ್ಠಿ, ಸಸಿ ನಡುವ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆ, ಆರೋಗ್ಯ ಶಿಬಿರ, ಸ್ವದೇಶಿ ಜಾಗೃತಿ, ದಿವ್ಯಾಂಗ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಮಾಡಲಾಗಿದೆ. ಈ ಮೂಲಕ ಸೇವಾ ಪಾಕ್ಷಿಕ ಅಭಿಯಾನವನ್ನು ಯಶಸ್ವಿಗೊಳಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ ವಿವರಿಸಿದರು.