ಮೈಸೂರು: ಮುಕ್ತಗಂಗೋತ್ರಿಯ ನಳ ಸಭಾಂಗಣದಲ್ಲಿ ಆಯೋಜಿಸಿದ್ದ ಗಾನಯಾನ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಯಿತು. ಅಮರ ಮಧುರ ಹಳೇ ಕನ್ನಡ ಚಲನಚಿತ್ರ ಗೀತೆಗಳ ಗಾನಯಾನ ಮಾಧುರ್ಯದ ಹೂರಣವಾಗಿತ್ತು.
ಲಯನ್ಸ್ ಕ್ಲಬ್ ಪರಿವರ್ತನ ಶುಭಾರಂಭದ ಪ್ರಯುಕ್ತ ಪರಿವರ್ತನ ಫೌಂಡೇಶನ್, ಕರುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಸಭಿಕರನ್ನು ರಂಜಿಸಿತು.
ಗಾಯಕರಾದ ಡಾ.ಕೃಷ್ಣಮೂರ್ತಿ ಚಮರಂ ಮತ್ತು ಗಾನಸುಮಾ ಪಟ್ಟಸೋಮನಹಳ್ಳಿ ಅವರ ಪರಿಕಲ್ಪನೆಯಲ್ಲಿ 25 ಸುಮಧುರ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ತನ್ಮಯಗೊಳಿಸಿದರು. ಪ್ರತಿ ಗೀತೆಗೂ ಕೃಷ್ಣಮೂರ್ತಿ ಚಮರಂ ನೀಡುತ್ತಿದ್ದ ವರ್ಣನೆಯೂ ಸಂಗೀತದಂತೆಯೇ ಇತ್ತು.
1986ರಲ್ಲಿ ತೆರೆಕಂಡ ಮಲೆಯ ಮಾರುತ ಸಿನಿಮಾದ ‘ಎಲ್ಲೆಲ್ಲೂ ಸಂಗೀತವೇ…’ ಹಾಡಿನ ಮೂಲಕ ಶುಭಾರಂಭ ಗೀತೆ ಹಾಡಿದರು. ಬಳಿಕ ಮಲೆ ಮಹದೇಶ್ವರರ ಕುರಿತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಯಳಂದೂರಿನ ಗಾಯಕ ರವಿಕುಮಾರ್ ಅವರು, ಮಾಂಗಲ್ಯ ಭಾಗ್ಯ ಸಿನಿಮಾದ ‘ಆಸೆಯ ಭಾವ’ ಹಾಡನ್ನು ಭಾವಪೂರ್ಣವಾಗಿ ಹಾಡಿದರು.
ದಲಿತ ಬಂಡಾಯದ ಕವಿ ಸಿದ್ದಲಿಂಗಯ್ಯ ಅವರು ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಕ್ಕೆ ಪ್ರೇಮಗೀತೆ ಬರೆದು ಧರ್ಮ ಸಂಕಟಕ್ಕೆ ಒಳಗಾದ ಸಂದರ್ಭವನ್ನು ಚಮರಂ ವಿವರಿಸಿದರೆ, ಗಾಯಕ ಗಾನಸುಮಾ ಪಟ್ಟಸೋಮನಹಳ್ಳಿ ಆ ಚಿತ್ರದ ‘ಗೆಳತಿ ಓ ಗೆಳತಿ’ ಗೀತೆಯನ್ನು ಹಾಡಿ ಶ್ರೋತೃಗಳನ್ನು ರಂಜಿಸಿದರು.
ಬಳಿಕ ಮುರಳೀಧರ್-ಮಮತಾಶ್ರೀ ಗಂಗೋತ್ರಿ ಅವರು ‘ಎರಡು ಕನಸು’ ಚಿತ್ರದ ‘ತಂನಂ ತಂನಂ ಮನಸು ಮಿಡಿಯುತ್ತಿದೆ’ ಗೀತೆಯನ್ನು ಹಾಡಿದರು. ಗಾಯಕಿ ಲಕ್ಷ್ಮೀದೇವಮ್ಮ ಅವರು ಬಂಗಾರದ ಜಿಂಕೆ ಚಿತ್ರದ ‘ಸಂಗಾತಿಯೇ ಬಳಿ ಬಾರದೇ?’ ಗೀತೆಯನ್ನು ಸೊಗಸಾಗಿ ಹಾಡಿದರು. ಈ ರಾಗಲಹರಿಗೆ ಕೇಳುಗರು ಭಾವಪರವಶರಾದರು.
ಯಾರಿವನು ಸಿನಿಮಾದ ಕಾವೇರಿ ಏಕೆ ಓಡುವೆ, ನನ್ನಲ್ಲಿ ಪ್ರೀತಿ ಇಲ್ಲವೇ ಗೀತೆಯನ್ನು ಹಾಡಲಾಯಿತು. 2 ಗಂಟೆಗಳ ಕಾಲ 25 ಗೀತೆಗಳನ್ನು ಹಾಡಿದ ಗಾಯಕರು ಸಂಗೀತ ಸಂಜೆಯನ್ನು ಸಂಪನ್ನಗೊಳಿಸಿದರು.
ಸಿನಿಮಾ ಶಿಷ್ಟ ಸಾಹಿತ್ಯವೆಂದು ಪರಿಗಣಿಸಿಲ್ಲ. ಗಂಭೀರವಾದಂತಹ ಸಾಹಿತ್ಯವೆಂದು ಪರಿಗಣಿಸಬೇಕು. ಎಲೆಮರಿ ಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರುತಿಸಲು ಗಾನಯಾನ ಆಯೋಜಿಸಲಾಗಿದೆ ಎಂದು ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.
ಪತ್ರಕರ್ತ ಸಿ.ಮೋಹನಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕೃಷಿ ವಿಜ್ಞಾನಿ ವಸಂತಕುಮಾರ ತಿಮಕಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಸತೀಶ್, ಜಿಲ್ಲಾಧ್ಯಕ್ಷ ಕೆ.ವೇಣುಗೋಪಾಲ್, ಬರಹಗಾರ ರಾಘವೇಂದ್ರ ಅಪುರಾ, ಕವಿ ಮಹೇಶ್ ಇರಸವಾಡಿ ಇತರರು ಇದ್ದರು.