ಮೈಸೂರು: ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿಯು ‘ಗಾನಸಿರಿ-ವೇದಾಂತ ಲಹರಿ ಭಾಗ 12’ ಕಾರ್ಯಕ್ರಮವನ್ನು ಫೆ.16ರಿಂದ 23 ರವರೆಗೆ ನಗರದ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದೆ.
ಪ್ರತಿ ದಿನ ಸಂಜೆ 5ರಿಂದ ರಾತ್ರಿ 8.30ರವರೆಗೆ ಒಂದೇ ವೇದಿಕೆಯಲ್ಲಿ ಪ್ರವಚನ ಹಾಗೂ ಖ್ಯಾತ ಗಾಯಕರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಶ್ರೀವಾದಿರಾಜ ಗುರುಸಾರ್ವಭೌಮ ವಿರಚಿತ ‘ರುಗ್ಮಿಣೀಶ ವಿಜಯ ಸಪ್ತಾಹ’ನಡೆಯಲಿದ್ದು, ವಿದ್ವಾಂಸ ಹಾಗೂ ಶ್ರೀ ವ್ಯಾಸರಾಜ ಮಠದ ದಿವಾನರಾದ ಪಂ.ಶ್ರೀ ಬ್ರಹ್ಮಣ್ಯಾಚಾರ್ಯ ಪ್ರವಚನದ ಸಪ್ತಾಹ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
16ರಂದು ಸಂಜೆ 6 ಗಂಟೆಗೆ ಶ್ರೀ ವ್ಯಾಸರಾಜ ಮಠದ(ಸೋಸಲೆ) ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಯುವ ವಿದ್ವಾಂಸರಾದ ಪ್ರಣವಾಚಾರ್ಯ, ಸುಘೋಷಾಚಾರ್ಯ, ಎಚ್.ಎನ್.ಸೌವಿತ್ರಿ, ಶ್ರೀಶ ಅಯಾಚಿತ ಅವರನ್ನು ಸನ್ಮಾನಿಸಲಾಗುತ್ತದೆ. ಬಳಿಕ ಸನ್ಮಾನಿತರು, ವಿದುಷಿಯರಾದ ಎನ್.ಧನ್ಯಾ, ಎಂ.ಎಸ್.ಕೀರ್ತನಾ, ಎಸ್.ಹಂಸಿಣಿ ಹಾಗೂ ನಯನಾ ನಾಗರಾಜ್ ಅವರೊಂದಿಗೆ ಯತಿವರೇಣ್ಯರ, ದಾಸವರೇಣ್ಯರ ಕೀರ್ತನೆಗಳ ವಿಶ್ಲೇಷಣೆ ಮಾಡಲಿದ್ದಾರೆ.
ಫೆ.17ರಿಂದ 23ರವರೆಗೆ ಸಂಜೆ 5 ಗಂಟೆಗೆ ‘ರುಗ್ಮಿಣೀಶ ವಿಜಯ ಸಪ್ತಾಹ’ ಪ್ರವಚನ ನಡೆಯಲಿದೆ. 17 ರಂದು ಬಾಗಲಕೋಟೆಯ ವಿದ್ವಾನ್ ಅನಂತ ಕುಲಕರ್ಣಿ, 18ರಂದು ಬೆಂಗಳೂರಿನ ವಿ.ಪ್ರಜ್ಞಾರಾವ್, 19ರಂದು ಕಲಬುರಗಿಯ ವಿ.ರಮೇಶ್ ಕುಲಕರ್ಣಿ, 20 ರಂದು ಬೆಂಗಳೂರಿನ ವಿ.ದಿವ್ಯಾ ಗಿರಿಧರ್, 21ರಂದು ಕಲಬುರಗಿಯ ವಿ.ಅನಂತರಾಜ್ ಮಿಸ್ತ್ರಿ, 22ರಂದು ಕೊಪ್ಪಳದ ವಿ.ಸುಪ್ರಿಯಾ ಪ್ರವೀಣ್ ಹಾಗೂ 23ರಂದು ಬೆಂಗಳೂರಿನ ವಿ.ರಾಯಚೂರು ಶೇಷಗಿರಿದಾಸ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.