ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಸೋಮವಾರ ಮಿನಿ ದಸರಾದಂತೆ ಗಣಪತಿ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ವಾಟರ್‌ಟ್ಯಾಂಕ್ ಗೆಳೆಯರ ಬಳಗ ಹಾಗೂ ಬಸ್ರಾಳು ಗ್ರಾಮಸ್ಥರ ಸಹಯೋಗದಲ್ಲಿ ಮುತ್ತೇಗೆರೆ ರಸ್ತೆಯ ವಾಟರ್‌ಟ್ಯಾಂಕ್ ಬಳಿ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. 21 ದಿನದ ಬಳಿಕ ಸಂಭ್ರಮ, ಸಡಗರದಿಂದ ವಿಸರ್ಜನೆ ಮಾಡಲಾಯಿತು.
ಬೆಳಗ್ಗೆ ಗಣಪತಿಗೆ ಪೂಜೆ ಸಲ್ಲಿಸಿ ಹಾಗೂ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಕಡಲೆಕಾಳು ಪ್ರಸಾದ ವಿತರಿಸಲಾಯಿತು. ಬಳಿಕ ವಿವಿಧ ಬಗೆಯ ಹೂಗಳಿಂದಲೇ ಅಲಂಕರಿಸಲಾಗಿದ್ದ ವಾಹನದಲ್ಲಿ ಗಣಪತಿಯನ್ನು ಕೂರಿಸಿ ಅಪಾರ ಸಂಖ್ಯೆ ಭಕ್ತರ ಜಯ ಘೋಷದ ನಡುವೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಾಗರದ ಮಹಿಳಾ ಡೊಳ್ಳು ತಂಡ, ಮೆಳ್ಳಹಳ್ಳಿಯ 30ಕ್ಕೂ ಹೆಚ್ಚು ತಮಟೆ ಕಲಾವಿದರು, ಮೇಲುಕೋಟೆಯ ಪೂಜಾ ಕುಣಿತ ಹಾಗೂ ಪಟದ ಕುಣಿತ ಕಲಾವಿದರು, ಕೋಲಾಟದ ಕಲಾವಿದರು, ಚಾಮರಾಜನಗರದ ಕಂಸಾಳೆ ಕಲಾವಿದರ ತಂಡ ಸೇರಿದಂತೆ ಹತ್ತಾರೂ ಜಾನಪದ ಕಲಾತಂಡದ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಯತು.
ಮೆರವಣಿಗೆಯುದ್ದಕ್ಕೂ ಭಕ್ತರು ಗಣಪತಿಗೆ ಹೂವುಗಳನ್ನು ಎರಚಿ ಹಾಗೂ ಪೂಜೆ ಸಲ್ಲಿಸಿದರು. ಮಹಿಳೆಯರು ಮತ್ತು ಮಕ್ಕಳು ಅಲಂಕೃತ ಗಣೇಶ ಮಂಟಪದ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಾತ್ರವಲ್ಲದೆ ಕೇಸರಿಶಾಲು ಧರಿಸಿ ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಅದ್ದೂರಿ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಗಣಿಗ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಸೇರಿದಂತೆ ಹಲವರು ಭಾಗವಹಿಸಿದರು. ಮಾತ್ರವಲ್ಲದೆ ತಮಟೆ ಸದ್ದಿಗೆ ಯುವಕರೊದಿಗೆ ಹೆಜ್ಜೆ ಹಾಕಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಜೆ ಆರು ಗಂಟೆ ಸುಮಾರಿಗೆ ಹೊಸಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಬಳಿಕ ಮಳೆ ಸುರಿದಿದ್ದು ವಿಶೇಷ. ಕಾರ್ಯಕ್ರಮದ ಬಳಿಕ ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ದಾಸೋಹ ನೆರವೇರಿತು. ಅಂತೆಯೇ ನೀರನ್ನು ತಂದು ಗಣಪತಿ ಪ್ರತಿಷ್ಠಾಪಿಸಿದ ಜಾಗದಲ್ಲಿಡಲಾಯಿತು. ಮಹಿಳೆಯರು ಪೂಜೆ ಸಲ್ಲಿಸಿದರು. ಯಾವುದೇ ಹಿತಕರ ಘಟನೆ ನಡೆಯದಂತೆ ಬಸರಾಳು ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದರು.