ಚನ್ನಗಿರಿ: ಪಟ್ಟಣದ ನೂರಾರು ಸ್ಥಳಗಳಲ್ಲಿ ಗಣೇಶನನ್ನು ಕೂರಿಸುವ ಬದಲು ಎಲ್ಲ ಸಮಾಜದವರು ಒಗ್ಗೂಡಿ ಒಂದು ಕಡೆ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಬ್ಬ ಅಚರಿಸಿ ಎಂದು ಶಾಸಕ ಬಸವರಾಜ್ ಶಿವಗಂಗಾ ಕಿವಿಮಾತು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಹಿಂದು ಏಕತಾ ಗಣಪತಿ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಒಂದೆಡೆ ಗಣಪತಿ ಕೂರಿಸಿ ಹಬ್ಬ ಆಚರಿಸುವುದರಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ ಎಂದರು.
ಸರ್ಕಾರದ ನಿಯಮದಂತೆ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡೋಣ. ಕಾನೂನಿನ ವಿರುದ್ಧ ಯಾರೂ ಹೋಗುವುದು ಬೇಡ. ಪಟ್ಟಣದಲ್ಲಿ ಇತರೆ ಯಾರಾದರೂ ಗಣಪತಿ ಇಟ್ಟರೆ ಅವರಿಗೆ ಯಾವುದೇ ತೊಂದರೆ ನೀಡುವುದು ಬೇಡ ಎಂದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 11 ದಿನ ಗಣೇಶನನ್ನು ಇಡಲಾಗುತ್ತದೆ. ಹಾಗಾಗಿ, ಮುಂಗಡವಾಗಿ 1 ಲಕ್ಷ ರೂ. ಹಣವನ್ನು ಸಮಿತಿಯವರಿಗೆ ನೀಡುತ್ತೇನೆ ಎಂದರು.
ಸಭೆಯಲ್ಲಿ ಪಟ್ಟಣದ ಮುಖಂಡರಾದ ಸಿಕೆಎಚ್ ಮಹೇಶ್ವರಪ್ಪ, ಪಿ.ಎನ್. ಕೃಷ್ಣ ಉಪಾಧ್ಯ, ಸಿ.ಎಚ್. ಶ್ರೀನಿವಾಸ್, ಎಂ. ಯೋಗೇಶ್, ಕಾಫಿಪುಡಿ ಶಿವಾಜಿ, ಬುಳ್ಳಿ ಗಣೇಶ್, ಸಿ. ನಾಗರಾಜ್, ಜಿ.ಬಿ. ಹಾಲೇಶ್, ಸಿ.ವೈ. ರವಿಕಮಾರ್, ಜತೇಂದ್ರರಾಜ್ ಇದ್ದರು.