ಜಿಲ್ಲೆ

ಸಕ್ಕರೆನಾಡಲ್ಲಿ ಬೆಲ್ಲದ ಗಣಪ ಸ್ಪೆಷಲ್: ವಿಕಸನ ಸಂಸ್ಥೆಯಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಮಾರಾಟ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಬೆಲ್ಲದ ಪಾಕದಿಂದ ಮಾಡಿದ ಗಣಪತಿ ಹಾಗೂ ಗೌರಿ ಮೂರ್ತಿ ಗಮನಸೆಳೆಯುತ್ತಿವೆ.

ಬೆಲ್ಲದ ಪಾಕದಿಂದ ಗೌರಿ ಮತ್ತು ಗಣೇಶನ ಮೂರ್ತಿಗಳು ತಯಾರಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ, ಬೆಲ್ಲದ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಮಂಡ್ಯದ ಬೆಲ್ಲಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೆಲ್ಲ ತಯಾರಿಕೆಯಲ್ಲಿ ರಾಸಾಯನಿಕ ಬಳಕೆಯು ಮಂಡ್ಯ ಬೆಲ್ಲಕ್ಕೆ ಕಪ್ಪು ಚುಕ್ಕೆ ಅಂಟಿತ್ತು. ಕೆಲ ವರ್ಷಗಳ ಹಿಂದೆ ಮಂಡ್ಯ ಬೆಲ್ಲವು ಖರೀದಿಯಾಗದೆ ತಿರಸ್ಕೃತಗೊಂಡ ಉದಾಹರಣೆಗಳಿವೆ. ಇಂತಹ ಹೊತ್ತಲ್ಲೆ ಎರಡು ವರ್ಷಗಳ ಹಿಂದೆ ಒಂದು ಜಿಲ್ಲೆ-ಒಂದು ಉತ್ಪನ್ನಕ್ಕೆ ಮಂಡ್ಯ ಬೆಲ್ಲ ಆಯ್ಕೆಯಾಗಿದೆ.

ಈ ಹಿನ್ನೆಲೆಯಲ್ಲಿ ರಾಸಾಯನಿಕ ಮುಕ್ತ ಗುಣಮಟ್ಟದ ಬೆಲ್ಲ ಉತ್ಪಾದನೆಗೆ ಕೃಷಿ ಇಲಾಖೆಯೂ ರೈತರನ್ನು ಪ್ರೇರೇಪಿಸುತ್ತಿದೆ. ವಿಕಸನ ಸಂಸ್ಥೆ ಕೂಡ ತನ್ನದೇ ಬ್ರ್ಯಾಂಡ್‌ನ ಬೆಲ್ಲ ಉತ್ಪಾದನೆ ಮಾಡುತ್ತಿದೆ. ವಿಭಿನ್ನ ಆಲೋಚನೆಯೊಂದಿಗೆ ಕಳೆದ ವರ್ಷ ಪ್ರಾಯೋಗಿಕವಾಗಿ ಬೆಲ್ಲದಿಂದ ತಯಾರಿಸಿದ 600 ಗೌರಿ-ಗಣೇಶನ ಮೂರ್ತಿಗಳನ್ನು ಮಾರಾಟ ಮಾಡಿತ್ತು. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಬೇಡಿಕೆ ಬಂತು. ಆದ್ದರಿಂದ ಈ ವರ್ಷ 2500-3000 ಮೂರ್ತಿಗಳ ತಯಾರಿಸಿದೆ.

ಬೆಲ್ಲದ ಮೂರ್ತಿಗಳನ್ನು ಮನೆಯಲ್ಲೇ ನೀರು ತುಂಬಿದ ಪಾತ್ರೆಗಳಲ್ಲಿ ವಿಸರ್ಜಿಸಿ, ಕರಗಿದ ಬೆಲ್ಲದ ನೀರಿನಿಂದಲೇ ಪ್ರಸಾದ ಸಿದ್ಧಪಡಿಸಿ ಜನರಿಗೆ ಹಂಚಬಹುದು. ಇದು ಮನಸ್ಸಿಗೆ ಒಗ್ಗುವುದಿಲ್ಲವೆಂದರೆ ಮೂರ್ತಿಗಳನ್ನು ಕರಗಿಸಿದ ನೀರನ್ನು ಕೈತೋಟದ ಗಿಡಗಳಿಗೂ ಹಾಕಬಹುದು. ರಾಸಾಯನಿಕಗಳನ್ನು ಬಳಸಿರದ ಈ ಮೂರ್ತಿಗಳನ್ನು ಕೆರೆಕಟ್ಟೆಗಳಲ್ಲೂ ವಿಸರ್ಜಿಸಬಹುದು.

ಐಎಎಸ್ ಅಧಿಕಾರಿ ಪ್ರೇರಣೆ: ಬೆಲ್ಲದ ಗಣಪತಿ ಮತ್ತು ಗೌರಿ ಮೂರ್ತಿ ತಯಾರಿಸುವ ಹಿಂದೆ ಈ ಹಿಂದೆ ಮಂಡ್ಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ವಿ.ವೆಂಕಟೇಶ್ ಪ್ರೇರಣೆಯಾಗಿದ್ದರು. ಗಣೇಶನ ಹಬ್ಬಕ್ಕೆ ಏನಾದರೂ ವಿಶೇಷ ಮಾಡಿ ಎಂದು ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್‌ಚಂದ್ರಗುರು ಅವರಿಗೆ ಸಲಹೆ ನೀಡಿದ್ದರು. ಆಗ ಬೆಲ್ಲದಿಂದ ಗಣೇಶನ ಮೂರ್ತಿ ತಯಾರಿದರೆ ಹೇಗೆಂದು ಪ್ರಸ್ತಾಪಿಸಿದಾಗ, ಅದಕ್ಕೆ ಡಾ.ವೆಂಕಟೇಶ್ ಪ್ರೋತ್ಸಾಹಿಸಿದರು. ಬಳಿಕ ಸಮಾನ ಮನಸ್ಕರು ಹಾಗೂ ಗಾಣದ ಮಾಲೀಕರೊಂದಿಗೆ ಈ ವಿಚಾರ ಚರ್ಚಿಸಿದ್ದರು. ಇದಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಾಥ್ ನೀಡಿದ್ದರು. ಬೆನ್ನಲ್ಲೇ ಬೆಂಗಳೂರಿನ ಮೋಲ್ಡ್ ತಯಾರಿಕರೊಬ್ಬರನ್ನು ಸಂಪರ್ಕಿಸಿ ಫೈಬರ್‌ನಿಂದ ವಿವಿಧ ಅಳತೆಗಳ ಗಣೇಶನ ಮೂರ್ತಿಗಳ ಮೋಲ್ಡ್‌ಗಳನ್ನು ಸಿದ್ಧಪಡಿಸಿದರು. ಅದನ್ನು ಬಳಸಿ ಆಲೆಮನೆಯಲ್ಲಿ ಬೆಲ್ಲದ ಪಾಕದಿಂದ ಗೌರಿ-ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.